ವಾಪಸ್ಸಾದರು ಶುಭ್ರಾ ಅಯ್ಯಪ್ಪ; 2 ಚಿತ್ರಗಳಲ್ಲಿ ಬಿಜಿಯಾದ ವಜ್ರಕಾಯ ಬೆಡಗಿ

Shubhra
Published on

ಬೆಂಗಳೂರು: ‘ವಜ್ರಕಾಯ’ ಚಿತ್ರದ ಬಳಿಕ ನಟಿ ಶುಭ್ರ ಅಯ್ಯಪ್ಪ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮತ್ತೆ ವಾಪಸ್ಸಾಗಿದ್ದಾರೆ. ‘ರಾಮನ ಅವತಾರ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಕೆಲವು ತಿಂಗಳ ಹಿಂದೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ‘ತಿಮ್ಮಯ್ಯ ಆಂಡ್ ತಿಮ್ಮಯ್ಯ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ಸಂಜಯ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಹಿರಿಯ ನಟ ಅನಂತ್ ನಾಗ್ 85 ವರ್ಷದ ಅಜ್ಜನ ಪಾತ್ರದಲ್ಲಿ ಹಾಗೂ ಅವರ ಮೊಮ್ಮಗನ ಪಾತ್ರದಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ದಿಗಂತ್​ಗೆ ಐಂದ್ರಿತಾ ರೇ ಮತ್ತು ಶುಭ್ರಾ ಅಯ್ಯಪ್ಪ ನಾಯಕಿಯರಾಗಿದ್ದು, ವಿನೀತ್ ಬೀಪ್ ಕುಮಾರ್, ಅಂಬುಜಾಕ್ಷಿ, ಪ್ರಕಾಶ್ ತುಮ್ಮಿನಾಡು, ಮಿಮಿಕ್ರಿ ಗೋಪಿ ತಾರಾಗಣದಲ್ಲಿದ್ದಾರೆ.

ತಾತ ಮತ್ತು ಮೊಮ್ಮಗ 30 ವರ್ಷಗಳ ಕಾಲ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಯಾವುದೋ ಒಂದು ವಿಷಯಕ್ಕೆ ಇಬ್ಬರು ಮೂರು ತಿಂಗಳು ಒಟ್ಟಿಗೆ ಇರಬೇಕೆಂದು ಒಪ್ಪಂದವಾಗುತ್ತದೆ. ಆಗ ಇಬ್ಬರ ನಡುವೆ ನಡೆಯುವ ಜುಗಲ್​ಬಂದಿಯೇ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಕಥಾವಸ್ತು. ಚಿತ್ರದಲ್ಲಿ ಐದು ಹಾಡುಗಳಿದ್ದು ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

ಗರುಡ ಮೂವೀಸ್ ಪಿಕ್ಚರ್ಸ್ ಬ್ಯಾನರ್​ನಲ್ಲಿ ರಾಜೇಶ್ ಶರ್ಮಾ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಬೆಂಗಳೂರು ಹಾಗೂ ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಗೆ ತಯಾರಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net