

ಬೆಂಗಳೂರು: ನಟಿ ಶರ್ವಿುಳಾ ಮಾಂಡ್ರೆ ಸದ್ಯ ಒಂದಷ್ಟು ಖುಷಿ ಮತ್ತೊಂದಿಷ್ಟು ಆತಂಕದಲ್ಲಿದ್ದಾರೆ. ಅದಕ್ಕೆ ಕಾರಣ ತಮಿಳಿನ ‘ನಾನುಂ ಸಿಂಗಲ್ ಧಾನ್’ ಸಿನಿಮಾ! ಹೌದು, ತಮಿಳಿನಲ್ಲಿ ಶರ್ವಿುಳಾ ಕೋ ಪ್ರೊಡ್ಯೂಸ್ ಮಾಡಿರುವ ಮೊದಲ ಸಿನಿಮಾ ಫೆ. 12ರಂದು ಬಿಡುಗಡೆ ಆಗುತ್ತಿದೆ. ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿರುವುದರಿಂದ ಸಹಜವಾಗಿ ಆ ಸಿನಿಮಾ ಗುಂಗಲ್ಲಿದ್ದಾರೆ. 2018ರಲ್ಲಿಯೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದರಾದರೂ, ಇದೀಗ ಅದರ ಫಲ 2021ಕ್ಕೆ ಸಿಗುತ್ತಿದೆ. ಸಂಸ್ಥೆಯ ಮೊದಲ ಚಿತ್ರವಾಗಿ ‘ನಾನುಂ ಸಿಂಗಲ್ ಧಾನ್’ ಸಿನಿಮಾ ತೆರೆಕಾಣುತ್ತಿದೆ.
ಆ ಬಗ್ಗೆ ಮಾಹಿತಿ ನೀಡುವ ಶರ್ವಿುಳಾ, ‘ಪ್ರೊಡಕ್ಷನ್ ಹೌಸ್ 2018ರಲ್ಲಿ ಶುರುವಾಗಿತ್ತು. ಆಗ ಎರಡು ಸಿನಿಮಾ ಮಾಡಲು ಪ್ಲಾನ್ ಶುರುವಾಯ್ತು. ‘ದಸರಾ’ ಸ್ಕ್ರಿಪ್ಟ್ ಕೇಳಿ ಆ ಚಿತ್ರವನ್ನೇ ಆರಂಭಿಸಿದರಾಯ್ತು ಎಂದು ಕೊಂಡೆ, ಆದರೆ, 14 ತಿಂಗಳು ಅದರ ಸ್ಕ್ರಿಪ್ಟ್ ಮೇಲೆಯೇ ನಿರ್ದೇಶಕ ಅರವಿಂದ್ ಶಾಸ್ತ್ರಿ ಕೆಲಸ ಮಾಡಿದರು. ಆಗ ಸಿಕ್ಕ ಮತ್ತೊಂದು ಸಿನಿಮಾ ‘ನಾನ್ ಸಿಂಗಲ್ ಧಾನ್’. ಈ ಚಿತ್ರ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಇದೀಗ ಆ ಚಿತ್ರ ಇನ್ನು ನಾಲ್ಕು ದಿನಗಳಲ್ಲಿ ರಿಲೀಸ್ ಆಗಲಿದೆ ಎನ್ನುತ್ತಾರೆ. ನೀನಾಸಂ ಸತೀಶ್ ಜತೆಗಿನ ದಸರಾ ಸಿನಿಮಾ ಬಗ್ಗೆಯೂ ಒಂದಷ್ಟು ಮಾತನಾಡುವ ಶರ್ವಿುಳಾ, ‘‘ದಸರಾ’ ಕ್ರೖೆಂ ಥ್ರಿಲ್ಲರ್ ಸಿನಿಮಾ. ಈ ಚಿತ್ರಕ್ಕೆ ನಾನು ಪೂರ್ಣ ಪ್ರಮಾಣದ ನಿರ್ಮಾಪಕಿ. ಈಗಾಗಲೇ ಶೇ. 75 ಭಾಗದ ಶೂಟಿಂಗ್ ಮುಗಿದಿದೆ. ಚಿತ್ರೀಕರಣೋತ್ತರ ಕೆಲಸಗಳು ಶುರುವಾಗಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ’ ಎನ್ನುವ ಶರ್ವಿುಳಾ, ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಚಿತ್ರದ ಶೂಟಿಂಗ್ನಲ್ಲಿಯೂ ಭಾಗವಹಿಸಲಿದ್ದಾರೆ.