

ಭಾನುವಾರ (ಅ.10) ಹಿರಿಯ ನಟಿ ರೇಖಾ ಅವರ ಹುಟ್ಟುಹಬ್ಬ. 1970ರಲ್ಲಿ ‘ಸಾವನ್ ಬಾಧೋಂ’ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರೇಖಾ, ನಂತರದ ವರ್ಷಗಳಲ್ಲಿ ತಮ್ಮ ಚೆಲುವು ಮತ್ತು ಪ್ರತಿಭೆಯಿಂದ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದು ಇದೀಗ ಇತಿಹಾಸ. ಆದರೆ, ಅದಕ್ಕೂ ಮುನ್ನ ರೇಖಾ, ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದರು ಮತ್ತು ಕನ್ನಡ ಚಿತ್ರರಂಗದಿಂದಲೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ಎಂಬ ವಿಷಯ ಗೊತ್ತಾ?
ತಮಿಳಿನ ಖ್ಯಾತ ನಟ ಜೆಮಿನಿ ಗಣೇಶನ್ ಮತ್ತು ಪುಷ್ಪವಲ್ಲಿ ದಂಪತಿಯ ಮಗಳಾದ ರೇಖಾ, ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ಎರಡು ಚಿತ್ರಗಳಲ್ಲಿ ನಟಿಸಿದರು. ನಂತರ ಅವರು ನಾಯಕಿಯಾಗಿ ನಟಿಸಿದ್ದು ಡಾ. ರಾಜಕುಮಾರ್ ಅಭಿನಯದ ‘ಆಪರೇಷನ್ ಜಾಕ್ ಪಾಟ್ ಸಿಐಡಿ 999’ ಚಿತ್ರದಲ್ಲಿ. ಬಾಂಡ್ ಸರಣಿಯ ಮೂರನೆಯ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮೋನಾ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದರು. ಇದರ ಮರುವರ್ಷವೇ, ರೇಖಾ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅಲ್ಲಿ ಖಾಯಂ ಆಗಿ ನೆಲೆಯೂರಿದರು.