

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ, ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ದ್ವಿವೇದಿ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಾಗಿದ್ದ ರಾಗಿಣಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇದರೊಂದಿಗೆ 'ಮಾದಕ' ನಟಿ ಎಸ್ಕೇಪ್ ಆದ್ರಾ ಎನ್ನುವ ಗುಮಾನಿ ಎದ್ದಿದೆ!
ಅವರ ಆಪ್ತರನ್ನು ಈ ಬಗ್ಗೆ ವಿಚಾರಿಸಿದಾಗ, ರಾಗಿಣಿ ಅವರ ಮನೆ ಲಾಕ್ ಆಗಿದೆ. ಅವರು ಮನೆಯಲ್ಲಿ ಇಲ್ಲ ಎಂಬ ಉತ್ತರ ಲಭ್ಯವಾಗತೊಡಗಿದೆ. ಸಿಸಿಬಿ ಪೊಲೀಸರೂ ಮುಖತಃ ನೋಟಿಸ್ ಕೊಡಲಾಗದ ಕಾರಣ, ಫೋನ್ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಯಾರ ಕರೆಯನ್ನೂ ರಾಗಿಣಿ ಸ್ವೀಕರಿಸಿಲ್ಲ. ಈ ನಡುವೆ, ಪೊಲೀಸರು ನೋಟಿಸನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸಿದ್ದಾರೆ.
ಯಾವುದಕ್ಕೂ ಪ್ರತಿಕ್ರಿಯೆ ನೀಡದಿದ್ದ ರಾಗಿಣಿ, ಈ ನೋಟಿಸನ್ನು ವಾಟ್ಸ್ಆ್ಯಪ್ ಮೂಲಕ ನೋಡಿದ್ದಾರೆ ಎಂದು ಹೇಳಲಾಗುತ್ತಿದೆ. ವಾಟ್ಸ್ಆ್ಯಪ್ನಲ್ಲಿ ಅವರು ನೋಟಿಸ್ ನೋಡಿದ್ದಕ್ಕೆ ಬ್ಲೂಟಿಕ್ ಮಾರ್ಕ್ ಬಂದಿದೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆದ್ದರಿಂದ ಅವರು ವಿಚಾರಣೆಗೆ ಹಾಜರಾಗಬೇಕಾದ್ದು ಅನಿವಾರ್ಯವಾಗುತ್ತದೆ. ಹಾಜರಾಗುತ್ತಾರಾ ಇಲ್ಲವೇ ಎಂಬುದು ಸದ್ಯದ ಕುತೂಹಲ. (ದಿಗ್ವಿಜಯ ನ್ಯೂಸ್)