

ಬೆಂಗಳೂರು: ‘ಸಿನಿಮಾ ಮಾಡುವುದನ್ನು ನಿಲ್ಲಿಸಿದೆ ಎಂದ ಮಾತ್ರಕ್ಕೆ, ಸಿನಿಮಾದಿಂದಲೇ ದೂರ ಉಳಿದೆ ಅಂತಲ್ಲ. ಒಂದಷ್ಟು ಕಾಡುವ ಪಾತ್ರಗಳ ಹುಡುಕಾಟದಲ್ಲಿದ್ದೆ. ಅದು ಸಿಗಲು ಇಷ್ಟು ವರ್ಷ ಬೇಕಾಯಿತು’.. ಹೀಗೆ ನಟಿ ಪ್ರೇಮಾ ಬಹುವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಆಗಮಿಸುತ್ತಿದ್ದಾರೆ. ಅದೂ ‘ವೆಡ್ಡಿಂಗ್ ಗಿಫ್ಟ್’ ಅನ್ನೋ ಚಿತ್ರದ ಮೂಲಕ.
ಕಳೆದ 20 ವರ್ಷಗಳಿಂದ ಷೇರು ಮಾರುಕಟ್ಟೆ ಮತ್ತು ಸೇಲ್ಸ್ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಇರುವ ವಿಕ್ರಂಪ್ರಭು ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ನಿರ್ವಣವನ್ನೂ ಮಾಡುತ್ತಿದ್ದಾರೆ. ‘ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಪತಿ ಪತ್ನಿ ನಡುವೆ ಕಾರಣಾಂತರಗಳಿಂದ ಮುನಿಸು ಎದುರಾದಾಗ ಆದಾಗ, ಅದ್ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಿದ್ದೇವೆ. ನ. 15ರಿಂದ ಶೂಟಿಂಗ್ ಶುರುವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ವಿಕ್ರಂ ಪ್ರಭು. ಕೊಂಚ ತಡವಾಗಿಯಾದರೂ, ಒಳ್ಳೇ ಕಥೆಯೊಂದಿಗೆ ಬಂದಿದ್ದಾರೆ ಪ್ರೇಮಾ. ‘ಮೊದಲನೆಯದಾಗಿ ಕಮ್ಬ್ಯಾಕ್ ಎನ್ನುವುದೇ ತಪು್ಪ. ಈವರೆಗೂ ನನಗಿಷ್ಟವಾಗುವ ಕಥೆ ಸಿಕ್ಕಿರಲಿಲ್ಲ. ಹಾಗಾಗಿ ಕೊಂಚ ಅಂತರ ಕಾಯ್ದುಕೊಂಡಿದ್ದೆ. ಇದೀಗ ಒಳ್ಳೆ ಕಥೆ ಸಿಕ್ಕಿದೆ. ಈ ವರೆಗೂ ಮಾಡದ ಲಾಯರ್ ಪಾತ್ರವೊಂದನ್ನು ‘ವೆಡ್ಡಿಂಗ್ ಗಿಫ್ಟ್’ ಸಿನಿಮಾದಲ್ಲಿ ಮಾಡುತ್ತಿದ್ದೇನೆ’ ಎನ್ನುವ ಪ್ರೇಮಾ ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಕಾರಣವನ್ನೂ ನೀಡಿದ್ದಾರೆ.
‘ನಾನು ಕಲಾವಿದೆ. ಯಾವಾಗ ಬಂದರೂ ನಡೆಯುತ್ತದೆ. ಯಾವಾಗಲೂ ಇಂಡಸ್ಟ್ರಿಯಲ್ಲಿಯೇ ಇರಬೇಕು ಎಂಬ ಆಸೆ ನನಗಿಲ್ಲ. ನನಗೆ ನನ್ನದೆ ಆದ ವೈಯಕ್ತಿಕ ಜೀವನ ಇದೆ. ಅದೇ ರೀತಿ ಒಳ್ಳೇ ಪಾತ್ರಕ್ಕೆ ಎಷ್ಟು ವರ್ಷ ಬೇಕಾದ್ರೂ ಕಾಯಲು ನಾನು ಸಿದ್ಧ’ ಎಂಬ ಮಾತನ್ನೂ ಸಹ ಹೇಳುತ್ತಾರೆ ಪ್ರೇಮಾ. ಈ ಚಿತ್ರದಲ್ಲಿ ನಿಶಾನ್ ನಾಣಯ್ಯ ನಾಯಕನಾಗಿ ನಟಿಸಲಿದ್ದು, ಅವರಿಗೆ ಸೋನು ಗೌಡ ಜೋಡಿಯಾಗಿದ್ದಾರೆ. ಪವಿತ್ರಾ ಲೋಕೇಶ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಆಶಿಶ್ ಪಾಸ್ಕರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಬಾಲಚಂದ್ರ ಪ್ರಭು ಅವರ ಸಂಗೀತ, ಉದಯ್ಲೀಲಾ ಛಾಯಾಗ್ರಹಣ ಮಾಡಲಿದ್ದಾರೆ.