

"ದಿಲ್ ಸೇ' ಚಿತ್ರದ ಮೂಲಕ 1998ರಲ್ಲಿ ಬಾಲಿವುಡ್ ಡೆಬ್ಯೂ ಮಾಡಿದ ನಟಿ ಪ್ರೀತಿ ಜಿಂಟಾ. ಬಳಿಕ "ಸೋಲ್ಜರ್', "ಮಿಷನ್ ಕಾಶ್ಮೀರ್', "ಕ್ಯಾ ಕೆಹ್ನಾ', "ಕೋಯಿ ಮಿಲ್ ಗಯಾ', "ವೀರ್ ಜಾರಾ' ಸೇರಿ 35ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇಂತಹ ಪ್ರೀತಿ 2008ರಲ್ಲಿ ಐಪಿಎಲ್ನ ಕಿಂಗ್ಸ್ 11 ಪಂಜಾಬ್ ತಂಡ ಖರೀದಿಸಿದ ಬಳಿಕ ಚಿತ್ರರಂಗದಲ್ಲಿ ಅಷ್ಟು ಬಿಜಿಯಾಗಿಲ್ಲ.
ಆಗೊಂದು ಈಗೊಂದು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, 2013ರಲ್ಲಿ "ಇಷ್ಕ್ ಇನ್ ಪ್ಯಾರಿಸ್' ಮತ್ತು 2018ರಲ್ಲಿ "ಭಯ್ಯಾಜಿ ಸೂಪರ್ಹಿಟ್' ಚಿತ್ರಗಳಲ್ಲಷ್ಟೇ ನಾಯಕಿಯಾಗಿ ನಟಿಸಿದರು. ಅದರ ನಡುವೆ 2016ರಲ್ಲಿ ಅಮೆರಿಕ ಮೂಲದ ಜೀನ್ ಗುಡೆನಾಫ್ ಜತೆ ಮದುವೆಯಾದ ಪ್ರೀತಿ, ಚಿತ್ರರಂಗದಿಂದ ಮತ್ತಷ್ಟು ಅಂತರ ಕಾಪಾಡಿಕೊಂಡಿದ್ದರು. 2022ರಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಪ್ರೀತಿ, ಮತ್ತೆ ಬಾಲಿವುಡ್ಗೆ ಬರುವುದಿಲ್ಲ ಎಂದೇ ಅವರ ಅಭಿಮಾನಿಗಳು ತೀರ್ಮಾನಿಸಿದ್ದರು.
ಆದರೆ, ಆರು ವರ್ಷಗಳ ಗ್ಯಾಪ್ನ ಬಳಿಕ 49 ವರ್ಷದ ಪ್ರೀತಿ ಜಿಂಟಾ, ಮತ್ತೆ ಬಾಲಿವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ರಾಜಕುಮಾರ್ ಸಂತೋಷಿ ನಿರ್ದೇಶಿಸುತ್ತಿರುವ "ಲಾಹೋರ್ 1947' ಚಿತ್ರದ ಮೂಲಕ ಪ್ರೀತಿ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಸದ್ಯ "ಗದರ್ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್ಗೆ ಪ್ರೀತಿ ಜೋಡಿಯಾಗಲಿದ್ದು, ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದೆ.