

ಬೆಂಗಳೂರು: ಕಳೆದ ವರ್ಷ ಲಾಕ್ಡೌನ್ಗೂ ಮುನ್ನ ಗಣೇಶ್ ಅಭಿನಯದ ‘ಸಖತ್’ ಎಂಬ ಚಿತ್ರ ಪ್ರಾರಂಭವಾಗಿದ್ದು ನೆನಪಿರಬಹುದು. ಆ ಚಿತ್ರದ ಒಂದು ಹಂತದ ಚಿತ್ರೀಕರಣವೂ ಮುಗಿದಿತ್ತು. ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿ, ಚಿತ್ರತಂಡದ ಯೋಜನೆಗಳೆಲ್ಲ ತಲೆಕೆಳಗಾದವು. ಇದೀಗ, ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರತಂಡಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.
‘ಸಖತ್’ ಚಿತ್ರದಲ್ಲಿ ಇಬ್ಬರು ನಾಯಕಿಯರಂತೆ. ಸುರಭಿ ಎಂಬ ತೆಲುಗು ನಟಿ ಚಿತ್ರದ ಒಬ್ಬ ನಾಯಕಿಯಾಗಿದ್ದಾರೆ ಎಂಬ ವರ್ತಮಾನ ಕಳೆದ ವರ್ಷವೇ ಬಂದಿತ್ತು. ಇದೀಗ, ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸದ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ನಿಶ್ವಿಕಾ ಈ ಚಿತ್ರದಲ್ಲಿ ನಕ್ಷತ್ರ ಎಂಬ ಸ್ಕೂಲ್ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಕ್ಷತ್ರ ಬರೀ ಸ್ಕೂಲ್ ಟೀಚರ್ ಅಷ್ಟೇ ಅಲ್ಲ, ಕುಗ್ಗಿದವರಿಗೆ ತಮ್ಮ ಮಾತುಗಳಿಂದ ಸ್ಪೂರ್ತಿ ತುಂಬುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಈ ಸಿಂಪಲ್ ಹುಡುಗಿ, ನಾಯಕನ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತಾಳೆ ಎಂಬುದೇ ಚಿತ್ರದ ಕಥೆಯಂತೆ.
‘ಸಖತ್’ ಚಿತ್ರವನ್ನು ಸಿಂಪಲ್ ಸುನಿ ಬರೆದು ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ನಡಿ ಈ ಸಿನಿಮಾ ನಿರ್ವಣವಾಗುತ್ತಿದೆ. ಗಣೇಶ್ ಸದ್ಯ ಕಜಕಿಸ್ತಾನದಲ್ಲಿ ‘ಗಾಳಿಪಟ 2’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಅಲ್ಲಿಂದ ಸದ್ಯದಲ್ಲೇ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರಂತೆ. ಅವರು ವಾಪಸ್ಸು ಬರುತ್ತಿದ್ದಂತೆಯೇ ಮಾರ್ಚ್ 22ರಿಂದ ‘ಸಖತ್’ ಚಿತ್ರೀಕರಣ ಪ್ರಾರಂಭವಾಗಲಿದೆ.