

ಬೆಂಗಳೂರು: ಪರಭಾಷಾ ಚಿತ್ರರಂಗದಿಂದ ಕನ್ನಡ ಸಿನಿಮಾಲೋಕಕ್ಕೆ ನಟಿಯರನ್ನು ಕರೆತರುವ ಪರಂಪರೆ ಸ್ಯಾಂಡಲ್ವುಡ್ಗೆ ಹೊಸದೇನಲ್ಲ. ಈಗ ಅಂಥದ್ದೊಂದು ‘ಲೆಗಸಿ’ಗೆ ಪರಭಾಷಾ ನಟಿ ಮಿಷಾ ನಾರಂಗ್ ನಾಯಕಿ ಆಗಿದ್ದಾರೆ. ಅಂದರೆ ಎಂ. ಸುಭಾಷ್ಚಂದ್ರ ಅವರ ಚೊಚ್ಚಲ ನಿರ್ದೇಶನದಲ್ಲಿ ನಟ ವಿಹಾನ್ ನಾಯಕರಾಗಿ ಅಭಿನಯಿಸುತ್ತಿರುವ ‘ಲೆಗಸಿ’ ಸಿನಿಮಾಗೆ ಮುಂಬೈ ಬೆಡಗಿ ಮಿಷಾ ನಾರಂಗ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ‘ಜಾಗ್ವಾರ್’ ಬೆಡಗಿ ದೀಪ್ತಿ ಸತಿ ಮಾಡಬೇಕಿದ್ದ ಪಾತ್ರ ಮಿಷಾ ಪಾಲಾಗಿದೆ. ಈ ಚಿತ್ರಕ್ಕೆ ದೀಪ್ತಿ ಸತಿಯನ್ನು ನಾಯಕಿ ಆಗಿಸುವ ಬಗ್ಗೆ ಚಿತ್ರತಂಡ ಈ ಹಿಂದೆ ಯೋಜನೆ ಹಾಕಿಕೊಂಡಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈಗ ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಯೊಬ್ಬರ ಪದಾರ್ಪಣೆ ಆಗಿದೆ.
‘ಮಿಷಾ ಮುಂಬೈನ ಮಾಡೆಲ್. ಈಗಾಗಲೇ ತೆಲುಗು ಸಿನಿಮಾವೊಂದಕ್ಕೆ ನಾಯಕಿ ಆಗಿರುವುದರಿಂದ ಅವರ ಬಗ್ಗೆ ತಿಳಿಯಿತು. ಜತೆಗೆ ತಮಿಳು ಚಿತ್ರವೊಂದಕ್ಕೂ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ನಮ್ಮ ಸಿನಿಮಾದ 2ನೇ ಶೆಡ್ಯೂಲ್ನಲ್ಲಿ ಅವರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಮಾ. 9ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಒಟ್ಟು 3 ಹಂತಗಳಲ್ಲಿ ಶೂಟಿಂಗ್ ನಡೆಯಲಿದ್ದು, ಏ.15ರಂದು ಚಿತ್ರೀಕರಣ ಮುಗಿಯಲಿದೆ. ಜುಲೈನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ’ ಎಂಬ ಮಾಹಿತಿ ನೀಡಿದ್ದಾರೆ ನಿರ್ದೇಶಕ
ಸುಭಾಷ್ಚಂದ್ರ. ‘ಇದು ಫ್ಯಾಮಿಲಿ ಸೆಂಟಿಮೆಂಟ್ ಇರುವ ಆಕ್ಷನ್-ಥ್ರಿಲ್ಲರ್ ಸಿನಿಮಾ. 1990ರಲ್ಲಿನ ಒಬ್ಬ ದೊಡ್ಡ ಲೇಖಕನಿಂದ ಶುರುವಾಗುವ ಕಥೆ ಬಳಿಕ ಅವನ ಮಗನ ಸುತ್ತ ಅಂದರೆ 2020ರವರೆಗೂ ಸಾಗಲಿದೆ. ಇದರಲ್ಲಿ ಮಿಷಾ ಕಾಲೇಜು ವಿದ್ಯಾರ್ಥಿನಿ ಹಾಗೂ ಸಿನಿಮಾ ಸ್ಕ್ರಿಪ್ಟ್ ರೈಟರ್ ಆಗಿ 2 ಶೇಡ್ನಲ್ಲಿ ಕಾಣಿಸಲಿದ್ದಾರೆ. ಮತ್ತೊಂದೆಡೆ ನಾಯಕ ವಿಹಾನ್ 3 ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.
ಸುಭಾಷ್ ಈ ಹಿಂದೆ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಗೆಳೆಯರೊಂದಿಗೆ ಸೇರಿ ‘ಗ್ರೇಟ್ ಬ್ರೋಸ್ ಪಿಕ್ಚರ್ಸ್’ ಎಂಬ ಸಂಸ್ಥೆ ಸ್ಥಾಪಿಸಿರುವ ಅವರು ಅದೇ ಬ್ಯಾನರ್ನಲ್ಲಿ ನಿರ್ವಪಕರಲ್ಲಿ ಒಬ್ಬರಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಭಾನುವಾರ ಈ ಚಿತ್ರದಲ್ಲಿನ ವಿಹಾನ್ ಫಸ್ಟ್ಲುಕ್ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ವಿಹಾನ್ ಇದರಲ್ಲಿ ಪಿಸ್ತೂಲ್ ಹಿಡಿದು ಆಂಗ್ರಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈನ ಸುಂದರ್ ಪಾಂಡ್ಯನ್ ಛಾಯಾಗ್ರಹಣ, ‘ಬಾಹುಬಲಿ’ ಸಿನಿಮಾಗೆ ಕೆಲಸ ಮಾಡಿದ್ದ ಶಿವಪ್ರೇಮ್ ಅವರ ಸಾಹಸ ಸಂಯೋಜನೆ ಈ ಸಿನಿಮಾಗಿದೆ.