ಹಾಗೇ ಸುಮ್ಮನೆ; ಮೇಘನಾ ಗಾಂವ್ಕರ್ ಹೊಸ ಫೋಟೋಶೂಟ್

Meghana
Published on

ಬೆಂಗಳೂರು: ‘ಸದ್ಯದಲ್ಲೇ ಹೊಸ ಫೋಟೋಗಳು ಬರಲಿವೆ ...’- ಹಾಗಂತ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಮೇಘನಾ ಗಾಂವ್ಕರ್. ಹಾಗೆಯೇ, ಆ ಫೋಟೋಶೂಟ್ ಹಿಂದಿನ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದರು. ಶಚಿನಾ ಹೆಗ್ಗಾರ್ ನೇತೃತ್ವದಲ್ಲಿ ನಡೆದ ಈ ಫೋಟೋಶೂಟ್​ನ ಫೋಟೋಗಳು ಇದೀಗ ಬಿಡುಗಡೆಯಾಗಿವೆ. ಇಷ್ಟಕ್ಕೂ ಹೊಸ ಫೋಟೋಗಳೇಕೆ? ಮೇಘನಾ ಏನಾದರೂ ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರಾ? ಅದಕ್ಕೆ ಸಂಬಂಧಿಸಿದ ಫೋಟೋಗಳಾ ಇವು? ಎಂಬ ಪ್ರಶ್ನೆಗಳು ಬರೋದು ಸಹಜ.

ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಹಾಗೇ ಸುಮ್ಮನೆ ಮಾಡಿಸಿದ ಶೂಟ್ ಇದು, ಯಾವುದೇ ಚಿತ್ರಕ್ಕಲ್ಲ ...’ ಎಂಬ ಉತ್ತರ ಅವರಿಂದ ಬರುತ್ತದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇಘನಾ ಅಭಿನಯದ ‘ಕರ್ವ 3’ ಚಿತ್ರ ಇಷ್ಟರಲ್ಲಿ ಪ್ರಾರಂಭವಾಗಬೇಕಿತ್ತು. ಅದಲ್ಲದೆ ಇನ್ನೂ ಒಂದು ಹೊಸ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರಂತೆ. ಆದರೆ, ಕರೊನಾ 3ನೇ ಅಲೆ ಕಾರಣದಿಂದ ಎರಡೂ ಚಿತ್ರಗಳು ಸ್ವಲ್ಪ ಮುಂದಕ್ಕೆ ಹೋಗಿವೆ. ಈ ಪೈಕಿ ‘ಕರ್ವ 3’ ಅಕ್ಟೋಬರ್​ನಲ್ಲಿ ಶುರುವಾಗಲಿದೆಯಂತೆ. ಆ ನಂತರ ಇನ್ನೊಂದು ಚಿತ್ರ ... ಇದಲ್ಲದೆ, ‘ಶುಭ ಮಂಗಳ’ ಎಂಬ ಇನ್ನೊಂದು ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ ಮೇಘನಾ.

ಕೆಲವು ತಿಂಗಳುಗಳ ಹಿಂದೆ ಹಿರಿಯ ನಿರ್ದೇಶಕ ಭಗವಾನ್ ಅವರು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಸಂತೋಷ್ ಗೋಪಾಲ್ ನಿರ್ದೇಶಿಸಿರುವ ಈ ಚಿತ್ರ ಸಹ ಮುಗಿದಿದೆಯಂತೆ. ಐದು ಕಥೆಗಳಿರುವ ಈ ಚಿತ್ರದಲ್ಲಿ ರಾಕೇಶ್ ಮಯ್ಯ, ಹಿತಾ ಚಂದ್ರಶೇಖರ್, ಸಿದ್ಧಾರ್ಥ್ ಮಾಧ್ಯಮಿಕ ಸೇರಿ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net