ಅದೊಂದು ಮುಜುಗರ: 20 ಕೆ.ಜಿ ತೂಕ ಇಳಿಸಿರುವ ಹಿಂದಿನ ರಹಸ್ಯ ಬಿಚ್ಚಿಟ್ಟ 51ರ ಖುಷ್ಬೂ!

Published on
51 ವರ್ಷದ ನಟಿ ಖುಷ್ಬೂ ಸುಂದರ್ ಅವರು ಸದ್ಯ ಯುವತಿಯರನ್ನೂ ನಾಚಿಸುವಂತಹ ಫಿಟ್​ನೆಸ್ ಕಾಯ್ದುಕೊಂಡಿದ್ದಾರೆ. ಆದರೆ, ಚಿತ್ರರಂಗ ಹಾಗೂ ರಾಜಕೀಯದಲ್ಲೂ ಬ್ಯುಸಿ ಆಗಿರುವ ನಟಿ ಖುಷ್ಬೂ ಅವರು ಕೆಲ ವರ್ಷಗಳ ಕಾಲ ಅವರು ಫಿಟ್​ನೆಸ್ ಯೋಚನೆಗಳನ್ನು ಬದಿಗಿಟ್ಟರು. ಇನ್ನು, ನಟಿ ಖುಷ್ಬೂ ಅವರು ಆಗ ಸಿಕ್ಕಾಪಟ್ಟೆ ದಪ್ಪಾ ಆಗಿದ್ದರು. ಹೀಗಿದ್ದರೂ, ಮತ್ತೆ ನಟಿ ಖುಷ್ಬೂ ಅವರು ಫಿಟ್​ನೆಸ್​ ಕಡೆ ಗಮನ ಹರಿಸಿದ್ದಾರೆ. ಹೌದು, ಕಳೆದ 2 ವರ್ಷಗಳಿಂದ ನಟಿ ಮತ್ತೆ ಫಿಟ್​ನೆಸ್​ಗೆ ಆದ್ಯತೆ ನೀಡಿದ್ದಾರೆ.
ಜತೆಗೆ, ಒಂದು ತಿಂಗಳ ಹಿಂದೆ ಅವರು ಸಖತ್ ಸ್ಲಿಮ್ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳಲು ಆರಂಭಿಸಿದ್ದು ಅವರ ಅಭಿಮಾನಿಗಳು ಅಂತೂ ಈಗ ಫಿಟ್ ಆಗಿರುವ ನಟಿಯನ್ನು ನೋಡಿ ದಿಲ್ ಖುಷ್ ಆಗಿದ್ದಾರೆ. ಹಾಗಾಗಿ, ಈ ವಯಸ್ಸಿನಲ್ಲಿ ಖುಷ್ಬೂ ಅವರಿಗೆ ಮತ್ತೆ ಫಿಟ್​ನೆಸ್​ ಬಗ್ಗೆ ಆಸಕ್ತಿ ಯಾಕೆ? ಎಂಬ ಪ್ರಶ್ನೆಗೆ ನಟಿಯೇ ಸ್ವತಃ ಉತ್ತರ ನೀಡಿದ್ದಾರೆ. ಅಂದಹಾಗೆ, ಈ ಅಂದಗಾತಿಗೆ ತನ್ನದೇ ಕುಟುಂಬದಲ್ಲಿ ದಪ್ಪಾ ಇರುವ ಕಾರಣ ಮುಜುಗರ ಎದುರಾಗಿತ್ತಂತೆ. ಈ ಕಾರಣಕ್ಕೆ ಅವರು ಮತ್ತೆ ಫಿಟ್ ಆಗಲು ಪಣತೊಟ್ಟರು ಎನ್ನಲಾಗಿದೆ.
ನಟಿ ಖುಷ್ಬೂ, ''ನನ್ನ ಪತಿ ಸುಂದರ್ ಅವರು ಮೂರು ಸಿನಿಮಾಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಹೀಗಾಗಿ, ಅವರು ಜಿಮ್​ನಲ್ಲಿ ಕಸರತ್ತು ನಡೆಸಿದ್ದರು. ನನ್ನ ಮಕ್ಕಳು ಕೂಡಾ ಅಷ್ಟೇ, ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಾರೆ. ನನ್ನ ಪತಿ, ಮಕ್ಕಳು ಮೂವರು ಎತ್ತರವಿದ್ದಾರೆ. ಅವರಿಗೆ ಹೋಲಿಸಿದರೆ ನಾನು ದಪ್ಪ ಮತ್ತು ಎತ್ತರ ಕಡಿಮೆ. ಇದು ನನಗೆ ಕೊಂಚ ಮುಜುಗರ ತಂದಿತ್ತು. ಹೀಗಾಗಿ, ನನಗೂ ಸ್ಲಿಮ್ ಆಗಬೇಕು ಎಂದು ಅನಿಸಿತು. ನಾನು ಯೋಗ ಹಾಗೂ ವ್ಯಾಯಾಮ ಮಾಡೋಕೆ ಪ್ರಾರಂಭಿಸಿದೆ'' ಎಂದು ತಿಳಿಸಿದ್ದಾರೆ.
ಜತೆಗೆ, ''ನಾನು ತಿನ್ನುವುದಕ್ಕೆ ಬ್ರೇಕ್ ಹಾಕಿಲ್ಲ. ಐಸ್‌ಕ್ರೀಂ ಸೇವನೆ ಕಡಿಮೆ ಮಾಡಿದ್ದೇನೆ. ಮಟನ್ ಬಿರಿಯಾನಿ ತಿನ್ನೋದನ್ನು ನಿಲ್ಲಿಸಿಲ್ಲ. ಆಗೊಮ್ಮೆ, ಈಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇರುತ್ತೇನೆ. ನನಗೆ ಚಾಕೋಲೆಟ್ ಎಂದರೆ ಇಷ್ಟವಿಲ್ಲ. ಆದರೆ, ಚಾಕೊಲೇಟ್​ನಿಂದ ಮಾಡಿದ ತಿನಿಸುಗಳನ್ನು ಇಷ್ಟಪಡುತ್ತೇನೆ'' ಎಂದು ಸ್ಲಿಮ್ ಆಗಿರುವುದರ ಹಿಂದಿನ ಆಹಾರ ಕ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು, 20 ಕೆ.ಜಿ ತೂಕ ಇಳಿಸಿದ ನಂತರ ನಟಿ ಖುಷ್ಬೂ ಅವರು ಸಿನಿಮಾಗಳಿಗೆ ಮರಳಿದ್ದು, ಇದೀಗ ಎರಡು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net