

ಕನ್ನಡದ ನಟಿಯರು ಸಾಲುಸಾಲು ಪರಭಾಷಾ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜತೆಗೆ ಬೇರೆ ಚಿತ್ರರಂಗಗಳಲ್ಲೂ ಹೆಸರು ಮಾಡುತ್ತಿದ್ದಾರೆ. ಇದೀಗ ಕಾವ್ಯಾ ಶೆಟ್ಟಿ ಸದ್ದಿಲ್ಲದೆ ಮಾಲಿವುಡ್ಗೆ ಪ್ರಯಾಣ ಬೆಳೆಸಿದ್ದಾರೆ. ಹಾಗಂತ ಬೇರೆ ಭಾಷೆಯಲ್ಲಿ ಇದೇ ಅವರ ಮೊದಲ ಚಿತ್ರವಲ್ಲ. ತೆಲುಗಿನಲ್ಲಿ ‘ಗುರ್ತಂದಾ ಸೀತಾಕಲಂ’ ಚಿತ್ರದಲ್ಲಿ ನಟಿಸಿದ್ದಾರೆ. ಅದರ ಜತೆಗೆ ಮಲಯಾಳಂನ ‘ಬ್ರೋ ಡ್ಯಾಡಿ’ ಚಿತ್ರಕ್ಕೂ ಸಹಿಹಾಕಿದ್ದಾರೆ.
ವಿಶೇಷ ಏನೆಂದರೆ, ‘ಬ್ರೋ ಡ್ಯಾಡಿ’ ಚಿತ್ರದಲ್ಲಿ ನಾಯಕನಾಗಿ ಮೋಹನ್ ಲಾಲ್ ನಟಿಸುತ್ತಿದ್ದರೆ, ಪೃಥ್ವಿರಾಜ್ ಸುಕುಮಾರನ್ ‘ಲೂಸಿಫರ್’ ಬಳಿಕ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಈ ಚಿತ್ರದಲ್ಲಿ ಕಾವ್ಯಾ ಚಾನ್ಸ್ ಗಿಟ್ಟಿಸಿಕೊಂಡಿದ್ದು, ಅಷ್ಟೇ ವಿಶೇಷವಾದ ಪಾತ್ರವೂ ಅವರಿಗೆ ಸಿಕ್ಕಿದೆಯಂತೆ. ‘ಒಂದು ಮುದ್ದಾದ ಪಾತ್ರದ ಮೂಲಕ ಮಲಯಾಳಂ ಇಂಡಸ್ಟ್ರಿ ಪ್ರವೇಶಿಸುತ್ತಿದ್ದೇನೆ. ನನ್ನ ಮೊದಲ ಚಿತ್ರದಲ್ಲಿಯೇ ಪೃಥ್ವಿರಾಜ್ ಜತೆ ನಟಿಸುವ ಅವಕಾಶ ಸಿಕ್ಕಿದೆ. ಮೋಹನ್ ಲಾಲ್ ಸಹ ಈ ಸಿನಿಮಾದಲ್ಲಿದ್ದಾರೆ. ಸುಸಾನ್ ಹೆಸರಿನ ಪಾತ್ರ ನನ್ನದು. ಈಗಾಗಲೇ ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶೀರ್ಷಿಕೆ ಹೇಳುವಂತೆ ಇದೊಂದು ಮನರಂಜನಾತ್ಮಕ ಸಿನಿಮಾ. ‘ಲೂಸಿಫರ್’ ಬಳಿಕ ಬೇರೆಯದೇ ಶೈಲಿಯಲ್ಲಿ ಪೃಥ್ವಿರಾಜ್ ನಿರ್ದೇಶನಕ್ಕೆ ಮರಳಿದ್ದಾರೆ’ ಎನ್ನುತ್ತಾರೆ ಕಾವ್ಯಾ. ಇನ್ನು, ಇತ್ತ ಕಾವ್ಯಾ ಅಭಿನಯದ ‘ಲಂಕೆ’ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದೆ. ತೆಲುಗಿನ ಪ್ರಾಜೆಕ್ಟ್ ಕೆಲಸ ಮುಗಿದಿದ್ದು, ಬೇರೆಬೇರೆ ಕಥೆಗಳನ್ನೂ ಅವರು ಕೇಳುತ್ತಿದ್ದಾರೆ.