

ಬೆಂಗಳೂರು: ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಪ್ಲಾಸ್ಮಾ ದಾನ ಮಾಡಿ ಇತರರಿಗೂ ಮಾದರಿಯಾಗಿದ್ದ ನಟಿ ಕಾವ್ಯಾ ಶಾಸ್ತ್ರಿ, ಇದೀಗ ಕೂದಲು ದಾನ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿರಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಗರದ ಹಲವೆಡೆ ತೆರಳಿ ದಿನಸಿ ಕಿಟ್, ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಿದ್ದ ಕಾವ್ಯಾ, ಈಗ ಕ್ಯಾನ್ಸರ್ ರೋಗಿಗಳ ನೋವಿಗೆ ಸ್ಪಂದಿಸಿದ್ದಾರೆ.
ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ‘ಕ್ಯಾನ್ಸರ್ ರೋಗಿಗಳಿಗಾಗಿ ನಾನು ಕೂದಲು ದಾನ ಮಾಡಿದ್ದೇನೆ. ಕ್ಯಾನ್ಸರ್ನಿಂದ ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೇನೆ. ಆ ನೋವನ್ನು ತುಂಬ ಹತ್ತಿರದಿಂದ ಕಂಡಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ತುಂಬ ಸಣ್ಣ ಕೆಲಸವೇ ಇರಬಹುದು. ಆದರೆ, ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಈ ಒಂದೊಳ್ಳೆ ಕೆಲಸಕ್ಕೆ ನೀವು ಕೈ ಜೋಡಿಸಿ’ ಎಂದು ಮನವಿ ಮಾಡಿದ್ದಾರೆ.