ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಇಲಿಯಾನಾ! ಗೋವಾ ಬ್ಯೂಟಿಗೆ ಹರಿದುಬಂತು ಪ್ರಶ್ನೆಗಳ ಸುರಿಮಳೆ

Actress Ileana
Published on

ಮುಂಬೈ: ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ನಟಿ. ತಮ್ಮ ಮಾದಕ ನೋಟದಿಂದಲೇ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ಗರ್ಭಿಣಿಯಾಗಿರುವ ವಿಚಾರದಲ್ಲಿ ಇಲಿಯಾನಾ ಭಾರಿ ಸುದ್ದಿಯಾಗಿದ್ದರು. ಈ ಬಗ್ಗೆ ಭಾರಿ ಚರ್ಚೆಯು ಆಗಿತ್ತು. ಆದರೆ, ಇಲಿಯಾನಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆನಂತರ ಗರ್ಭಿಣಿ, ಗರ್ಭಪಾತ ಮತ್ತು ಆತ್ಮಹತ್ಯೆ ಕುರಿತು ಇಲಿಯಾನಾ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ತಾಯಿಯಾಗುತ್ತಿರುವ ಬಗ್ಗೆ ಇಲಿಯಾನಾ ಪೋಸ್ಟ್​ ಮಾಡಿದ್ದಾರೆ.

ಕಾಯಲು ಆಗುತ್ತಿಲ್ಲ ಇಲಿಯಾನಾ ಅವರು ತಾಯಿಯಾಗುತ್ತಿದ್ದಾರಂತೆ. ಮಗುವಿನ ಉಡುಗೆಯ ಫೋಟೋ ಹಾಗೂ ಅಮ್ಮ (Mama) ಎಂದು ಬರೆದಿರುವ ಲಾಕೆಟ್​ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನ ಪುಟ್ಟ ಡಾರ್ಲಿಂಗ್​ ಅನ್ನು ಭೇಟಿಯಾಗಲು ಕಾಯಲು ಆಗುತ್ತಿಲ್ಲ ಎಂದು ಫೋಟೋಗೆ ಶೀರ್ಷಿಕೆ ಸಹ ಬರೆದುಕೊಂಡಿದ್ದಾರೆ.

ತಂದೆ ಯಾರು? ಇಲಿಯಾನಾ ಗರ್ಭಿಣಿಯಾಗಿರುವ ಸಂಗತಿ ತಿಳಿಯುತ್ತಿದ್ದಂತೆ ಅನೇಕರು ಅವರಿಗೆ ಶುಭಕೋರುತ್ತಿದ್ದಾರೆ. ಆದರೆ, ಇಲಿಯಾನಾ ಈವರೆಗೂ ಮಗುವಿನ ತಂದೆಯ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಅನೇಕ ನೆಟ್ಟಿಗರು ತಂದೆಯ ಹೆಸರೇನು ಎಂದು ಕಾಮೆಂಟ್​ ಮೂಲಕ ಕೇಳುತ್ತಿದ್ದಾರೆ.

2019ರಲ್ಲೇ ಮುರಿದ ಸಂಬಂಧ

ಈ ಹಿಂದೆ ಆಸ್ಟ್ರೇಲಿಯಾ ಫೋಟೋಗ್ರಾಫರ್​ ಆ್ಯಂಡ್ರಿವ್​ ನೀಬೋನ್​ ಎಂಬುವರ ಜೊತೆ ಇಲಿಯಾನಾ ಸಂಬಂಧದಲ್ಲಿದ್ದರು. ಇಬ್ಬರು 2019ರಲ್ಲಿ ಬೇರೆಯಾಗಿದ್ದಾರೆ. ಅಂದಿನಿಂದ ಇಲಿಯಾನಾ ಏಕಾಂಗಿಯಾಗಿದ್ದಾರೆ. ಆದರೆ, ಇದೀಗ ದಿಢೀರನೇ ತಾಯಿಯಾಗುತ್ತಿರುವ ಸಂಗತಿಯನ್ನು ತಿಳಿಸಿದ ಕೂಡಲೇ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಕತ್ರಿನಾ ಕೈಫ್​ ಸಹೋದರನ ಜತೆ ಲವ್​

ಕೆಲವು ಮೂಲಗಳ ಪ್ರಕಾರ ಇಲಿಯಾನಾ ಕತ್ರಿನಾ ಕೈಫ್​ ಸೆಬಾಸ್ಟಿಯನ್​ ಅವರನ್ನು ಲವ್​ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಫೋಟೋ ಪೋಸ್ಟ್​ ಮಾಡಿದ ಕೂಡಲೇ ಇಲಿಯಾನಾ ಪರವಾಗಿ ಹಲವು ಕಮೆಂಟ್‌ಗಳು ಬರುತ್ತಿವೆ. ಅವರ ವೈಯಕ್ತಿಕ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಕೆಲವರು ಉತ್ತರಿಸಿದ್ದಾರೆ.

ಎಲ್ಲವು ಸುಳ್ಳು

ಕೆಲವು ವರ್ಷಗಳ ಹಿಂದೆ ಆ್ಯಂಡ್ರಿವ್​​ ಎಂಬುವರ ಜತೆ ನಾನು ಸಂಬಂಧದಲ್ಲಿದ್ದಿದ್ದು ನಿಮಗೆಲ್ಲ ತಿಳಿದೇ ಇದೆ. ಪರಸ್ಪರ ಒಪ್ಪಿಗೆ ಮೇರೆಗೆ 2019ರಲ್ಲಿ ಇಬ್ಬರು ವೈಯಕ್ತಿಕ ಕಾರಣಗಳಿಂದಾಗಿ ಬೇರೆ ಆಗಿದ್ದೇವೆ. ಆದಾಗ್ಯೂ ನಾನು ಸಂಬಂಧದಲ್ಲಿದ್ದಾಗ ನಾನು ಗರ್ಭಿಣಿ ಮತ್ತು ನನಗೆ ಗರ್ಭಪಾತ ಆಗಿದೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಇದೆಲ್ಲವು ಸುಳ್ಳು ಎಂದು ಇಲಿಯಾನಾ ಈ ಹಿಂದೆ ಸ್ಪಷ್ಟನೆ ನೀಡಿದ್ದರು.

ಸಿನಿಮಾ ಹಿನ್ನೆಲೆ

ಅಂದಹಾಗೆ ಇಲಿಯಾನಾ ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದಾರೆ. ತೆಲುಗು ಭಾಷೆಯ ದೇವದಾಸ್ ಚಿತ್ರದ ಮೂಲಕ ನಟಿ ಚಿತ್ರರಂಗ ಪ್ರವೇಶಿಸಿದರು. ಪೋಕಿರಿ (2006), ಮುನ್ನಾ (2007), ಜಲ್ಸಾ (2008) ಮತ್ತು ಜುಲಾಯಿ (2012) ನಂತಹ ಸೂಪರ್​ ಹಿಟ್ ಚಿತ್ರಗಳೊಂದಿಗೆ ಇಲಿಯಾನಾ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಮುಂಚಿದರು. ಕೇಡಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಿಜಯ್ ಸಿನಿಮಾ ನನ್ಬನ್​ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅನುರಾಗ್ ಬಸು ನಿರ್ದೇಶನದ ಸೂಪರ್ ಹಿಟ್ ಚಿತ್ರ ಬರ್ಫಿಯೊಂದಿಗೆ ಇಲಿಯಾನಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net