ಬೇರ ಚಿತ್ರದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಮಾತು

bera
Published on

ಧಾರಾವಾಹಿ ನಿರ್ದೇಶಕ ವಿನು ಬಳಂಜ ಆಕ್ಷನ್ ಕಟ್ ಹೇಳಿರುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ‘ಬೇರ’. ಯಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಹರ್ಷಿಕಾ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ, ತಮ್ಮ ಪಾತ್ರ, ಎದುರುಸಿದ ಸವಾಲುಗಳು, ಮುಂದಿನ ಪ್ರಾಜೆಕ್ಟ್​ಗಳ ಕುರಿತು ಹರ್ಷಿಕಾ ಪೂಣಚ್ಚ ವಿಜಯವಾಣಿ ಜತೆ ಮಾತನಾಡಿದ್ದಾರೆ.

| ಪ್ರಮೋದ ಮೋಹನ ಹೆಗಡೆ ಬೆಂಗಳೂರು

ಏನಿದು ‘ಬೇರ’? ಯಾವ ವಿಷಯದ ಕುರಿತಾದ ಚಿತ್ರ?

‘ಬೇರ’ ಚಿತ್ರದ ಕಥೆ ವಿಭಿನ್ನವಾದದ್ದು. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂತೆ ಇದು ಕರವಾಳಿ ಫೈಲ್ಸ್ ಎನ್ನಬಹುದು. ಕರಾವಳಿಯ ನೈಜ ಘಟನೆಯನ್ನು ಕಣ್ಣು ಮುಂದೆ ತರುವ ಪ್ರಯತ್ನವಿದು. ಹಾಗಂತ ಯಾವುದೇ ಒಂದು ಜನಾಂಗದ ಪರ ಅಥವಾ ವಿರೋಧ ಇದರಲ್ಲಿಲ್ಲ. ‘ಬೇರ’ ಎಂದರೆ ಬಿಜಿನೆಸ್ ಎಂದರ್ಥ. ಒಂದು ಜೀವ ಅಥವಾ ಒಬ್ಬರ ಜೀವನ ಬಿಜಿನೆಸ್ ಆಗಬಾರದು ಎಂಬ ಸಂದೇಶ ಸಾರುವ ಚಿತ್ರ. ಅದಕ್ಕಾಗಿಯೇ ಚಿತ್ರಕ್ಕೆ ‘ಮರ್ಚೆಂಟ್ ಆಫ್ ಡೆತ್’ ಎಂಬ ಅಡಿಬರಹವಿದೆ.

ಚಿತ್ರದಲ್ಲಿ ಚಾಲೆಂಜಿಂಗ್ ಅನ್ನಿಸಿದ್ದೇನು?

ಇಡೀ ಚಿತ್ರ ಎರಡು ಟ್ರಾ್ಯಕ್​ಗಳಲ್ಲಿ ಶೂಟಿಂಗ್ ಮಾಡಿದ್ದು. ನನ್ನ ಭಾಗದ ಚಿತ್ರೀಕರಣ ಆಗಬೇಕಿದ್ದರೆ ಉಳಿದವರ ಭಾಗ ಪೂರ್ತಿ ಆಗಿತ್ತು. ಅಲ್ಲಿ ಏನಿದೆ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಹಾಗೇ ಅಭಿನಯಿಸಬೇಕಿತ್ತು. ಸಾಮಾನ್ಯ ವಾಗಿ ಒಂದು ಪಾತ್ರದ ಮೇಲೆ ಫೋಕಸ್ ಇರುತ್ತೆ. ಆದರೆ, ಇಲ್ಲಿ ಮೂರ್ನಾಲ್ಕು ಪಾತ್ರಗಳು ನನ್ನ ಹಿಂದಿರುತ್ತೆ. ಅದೊಂಥರ ಹೊಸ ಅನುಭವ.

ನಿಮ್ಮ ಪಾತ್ರ ಹೇಗಿರಲಿದೆ?

ನನ್ನದು ಟ್ರಾವೆಲ್ ಏಜೆಂಟ್ ಪಾತ್ರ. ಎರಡು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಂದರಲ್ಲಿ ರಾಣಿಯಂತೆ ಮೆರೆಯುವ, ಮನರಂಜನೆ ನೀಡುವ ಗ್ಲಾಮರಸ್ ಹುಡುಗಿಯಾಗಿ ಮತ್ತೊಂದರಲ್ಲಿ ಗಂಭೀರವಾಗಿ ಇಡೀ ಕಥೆಯನ್ನು ಕಟ್ಟುವ ಹುಡುಗಿ. ಈವರೆಗೆ ನಾನು ಮಾಡಿರದ ಪಾತ್ರ ‘ಬೇರ’ದಲ್ಲಿ ಮಾಡಿದ್ದೇನೆ.

ನೀವು ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?

ನಿರ್ದೇಶಕ ವಿನು ಬಳಂಜ ಕರೆ ಮಾಡಿ ‘ಒಂದು ಮುಖ್ಯವಾದ ಪಾತ್ರ ಇದೆ’ ಎಂದರು. ಯಾರು ಹೀರೋ ಎಂದು ಕೇಳಿದ್ದಕ್ಕೆ ಕಂಭಗಳೇ ಹೀರೋ ಎಂದಿದ್ದರು. ಅವರನ್ನು ಭೇಟಿಯಾಗಿ ಪೂರ್ತಿ ಕಥೆ ಕೇಳಿದ ಬಳಿಕ ಒಪ್ಪಿಕೊಂಡೆ.

ಪ್ರೇಕ್ಷಕರು ಈ ಚಿತ್ರದಲ್ಲಿ ಏನನ್ನು ನಿರೀಕ್ಷಿಸಬಹುದು?

‘ದಿ ಕಾಶ್ಮೀರ್ ಫೈಲ್ಸ್’ ಬರುವವರೆಗೂ ಅಲ್ಲಿ ಏನಾಗಿತ್ತು ಅಂತ ಗೊತ್ತಿರಲಿಲ್ಲ. ಅದೇ ರೀತಿ ಕರಾವಳಿ ಭಾಗದ ಕಥೆಯನ್ನು ತಿಳಿದುಕೊಳ್ಳಲು ಈ ಚಿತ್ರ ನೋಡಬೇಕು. ಹಾಗೇ ವಿಭಿನ್ನವಾದ ಹೊಸ ಲುಕ್​ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ.

ನಿಮ್ಮ ಮುಂದಿನ ಪ್ರಾಜೆಕ್ಟ್?

ಈ ವರ್ಷ ನನ್ನ ಪಾಲಿಗೆ ಲಕ್ಕಿ. ಹಲವು ಸಿನಿಮಾಗಳು ಲೈನಪ್​ನಲ್ಲಿವೆ. ಭೋಜ್​ಪುರಿಯಲ್ಲಿ ಸಿನಿಮಾ ಮಾಡಿ ಪ್ರಶಸ್ತಿ ಪಡೆದೆ. ಅಲ್ಲಿ ಇನ್ನೂ ಎರಡು ಸಿನಿಮಾಗಳು ರೆಡಿ ಆಗಿವೆ. ‘ಮಾರಕಾಸ್ತ್ರ’, ‘ಕಾಳನಾಗಿಣಿ’, ‘ತಾಯ್ತ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net