ಮದಗಜನಿಗೆ ಆಶಿಕಾ ಮನದರಸಿ: ಫೆ.20ಕ್ಕೆ ಶೂಟಿಂಗ್ ಆರಂಭ

Madagaja
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಆಶಿಕಾ ರಂಗನಾಥ್, ಕೈಯಲ್ಲಿ ಸಲಿಕೆ, ಬಿದಿರಿನ ಬುಟ್ಟಿ ಹಿಡಿದು ಗದ್ದೆ ಕೆಲಸಕ್ಕೆ ಹೊಂಟವ್ರೆ! ಜೀನ್ಸ್ ಪ್ಯಾಂಟ್, ಟೀ ಶರ್ಟ್ ಬದಿಗಿಟ್ಟು, ಅಪ್ಪಟ ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟು ಮತ್ತಷ್ಟು ಅಂದವಾಗಿದ್ದಾರೆ. ಅರೇ.. ಆಶಿಕಾಗೇನಾಯ್ತು? ಅಂಥದ್ದೇನೂ ಆಗಿಲ್ಲ.. ಈವರೆಗೂ ಮಾಡದ ಹೊಸ ಬಗೆಯ ಪಾತ್ರವೊಂದನ್ನು ಆಶಿಕಾ ಮಾಡುತ್ತಿದ್ದಾರೆ. ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದ ಅವರೀಗ, ಹಳ್ಳಿ ಹುಡುಗಿಯಾಗಿ ಎದುರಾಗುತ್ತಿದ್ದಾರೆ. ಅದೂ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕತ್ವದ ‘ಮದಗಜ’ ಚಿತ್ರದಲ್ಲಿ ಎಂಬುದು ವಿಶೇಷ.

‘ಅಯೋಗ್ಯ’ ಸಿನಿಮಾ ಮೂಲಕ ಚಂದನವನದಲ್ಲಿ ಯಶಸ್ಸು ಗಿಟ್ಟಿಸಿಕೊಂಡ ನಿರ್ದೇಶಕ ಮಹೇಶ್ ಕುಮಾರ್, ‘ಮದಗಜ’ ಸಿನಿಮಾಗೆ ಆಕ್ಷನ್-ಕಟ್ ಹೇಳುವ ತಯಾರಿಯಲ್ಲಿದ್ದಾರೆ. ನಾಯಕನ ಆಯ್ಕೆ ಕಳೆದ ವರ್ಷವೇ ಆಗಿದ್ದರೂ, ನಾಯಕಿ ಯಾರೆಂಬುದನ್ನು ಇಲ್ಲಿಯವರೆಗೂ ರಿವೀಲ್ ಮಾಡಿರಲಿಲ್ಲ. ಪ್ರೇಮಿಗಳ ದಿನದಂದೇ ಆ ವಿಚಾರವನ್ನು ಹೊರಹಾಕಿದ್ದಾರೆ. ಮೊದಲ ಬಾರಿಗೆ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಈವರೆಗೂ ನಾನು ಗ್ಲಾಮರಸ್ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಎದುರಾಗಿದ್ದೇ ಹೆಚ್ಚು. ‘ಮದಗಜ’ ಆ ಎಲ್ಲ ಸಿನಿಮಾಗಳಿಗಿಂತ ಭಿನ್ನ. ಪೂರ್ಣ ಪ್ರಮಾಣದಲ್ಲಿ ಹಳ್ಳಿ ಹುಡುಗಿಯಾಗಿ, ಕೃಷಿ ಮಾಡುವಷ್ಟು ಗಟ್ಟಿ ಹುಡುಗಿಯಾಗಿ ನಾನು ಕಾಣಿಸಲಿದ್ದೇನೆ. ನಿರ್ದೇಶಕ ಮಹೇಶ್, ಅಷ್ಟೇ ಚೆಂದದ ಪಾತ್ರವನ್ನು ಹೆಣೆದಿದ್ದಾರೆ’ ಎನ್ನುವ ಆಶಿಕಾಗೆ ಚಿತ್ರತಂಡದ ಮೇಲೆ ಅಪಾರ ನಿರೀಕ್ಷೆಗಳಿವೆ. ಅಷ್ಟೇ ಉತ್ಸುಕತೆಯಲ್ಲೂ ಅವರಿದ್ದಾರೆ. ಈ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ಅವರಿಗೆ ಬಲಿಷ್ಠ ಚಿತ್ರತಂಡವೇ ಸಿಕ್ಕಿದ್ದು ಅವರ ಖುಷಿಗೆ ಮತ್ತೊಂದು ಕಾರಣ. ‘ಪ್ರತಿ ಸಿನಿಮಾದಲ್ಲಿ ಕಲಾವಿದರಷ್ಟೇ ಚಿತ್ರತಂಡವೂ ಗಟ್ಟಿ ಆಗಿರಬೇಕಾಗುತ್ತದೆ. ‘ಮದಗಜ’ದಲ್ಲಿ ಆ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ. ಎಲ್ಲ ದೃಷ್ಟಿಯಿಂದಲೂ ಇದು ಒಂದೊಳ್ಳೆಯ ಸಿನಿಮಾ ಆಗುತ್ತದೆ. ತಾಂತ್ರಿಕವಾಗಿಯೂ ಚಿತ್ರ ಸದ್ದು ಮಾಡಲಿದೆ’ ಎಂಬ ಭರವಸೆ ಅವರದ್ದು.

‘ರಾಬರ್ಟ್’ ಸಿನಿಮಾ ನಿರ್ಮಾಣ ಮಾಡುತ್ತಿರುವ ಉಮಾಪತಿ ಶ್ರೀನಿವಾಸ್, ‘ಮದಗಜ’ಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಮಫ್ತಿ’ ಚಿತ್ರದ ಛಾಯಾಗ್ರಾಹಕ ನವೀನ್ ಕುಮಾರ್ ಈ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇನ್ನುಳಿದ ಪಾತ್ರವರ್ಗ, ತಾಂತ್ರಿಕ ಬಳಗದ ವಿವರವೂ ಮುಂದಿನ ದಿನಗಳಲ್ಲಿ ಬಹಿರಂಗ ವಾಗಲಿದೆ. ಫೆ. 20ರಂದು ಶೂಟಿಂಗ್​ಗೆ ಚಾಲನೆ ಸಿಗಲಿದ್ದು, ಈ ವರ್ಷಾಂತ್ಯಕ್ಕೆ ಚಿತ್ರ ತೆರೆಕಾಣುವ ಸಾಧ್ಯತೆ ಇದೆ.

ಕೃಷಿ ಮಾಡುವ ರಫ್ ಆಂಡ್ ಟಫ್ ಹುಡುಗಿಯಾಗಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಿರ್ದೇಶಕ ಮಹೇಶ್ ಒಳ್ಳೆಯ ಪಾತ್ರವನ್ನೇ ನೀಡಿದ್ದಾರೆ. ಕಡಿಮೆ ಮೇಕಪ್ ಜತೆಗೆ ನೈಜವಾಗಿಯೇ ನನ್ನನ್ನು ತೋರಿಸಲಿದ್ದಾರೆ.

| ಆಶಿಕಾ ರಂಗನಾಥ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net