ಬಾಲಿವುಡ್​ ನಟಿ ಅರ್ಚನಾ ಗೌತಮ್​ ಮೇಲೆ ಕಾಂಗ್ರೆಸ್​ ಕಾರ್ಯಕರ್ತರ ಹಲ್ಲೆ! ಕಾರಣವೇನು ಗೊತ್ತಾ?

archana gautam
Published on

ಮಾಡೆಲ್ ಆಗಿ ಮಿಂಚಿ, ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಕುಣಿದು, ಬಾಲಿವುಡ್‌ನಲ್ಲೂ ವಿಶೇಷ ಪಾತ್ರಗಳಲ್ಲಿ ನಟಿಸಿರುವ ಖ್ಯಾತಿ ಅರ್ಚನಾ ಗೌತಮ್‌ಗೆ ಸಲ್ಲುತ್ತದೆ. 2021ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ಅರ್ಚನಾ, ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಆದರೆ, ಕಾಂಗ್ರೆಸ್​ ಪಕ್ಷದಲ್ಲಿ ಸಕ್ರಿಯರಾಗಿರುವ ಅವರು, ಶುಕ್ರವಾರ (ಸೆ. 29) ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ಖುಷಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾಗೆ ಅಭಿನಂದನೆ ಸಲ್ಲಿಸಲು ದೆಹಲಿಯ ಕೇಂದ್ರ ಕಚೇರಿಗೆ ತಂದೆ ಗೌತಮ್ ಜತೆ ತೆರಳಿದ್ದರು. ಆದರೆ, ಅಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅರ್ಚನಾ ಮತ್ತವರ ತಂದೆಯನ್ನು ತಡೆದು, ಎಳೆದಾಡಿ, ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅರ್ಚನಾ ತಂದೆ ಪೊಲೀಸ್ ದೂರು ದಾಖಲಿಸಲಿದ್ದಾರೆ ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ಪ್ರಿಯಾಂಕಾ ವಾದ್ರಾರ ಆಪ್ತ ಸಹಾಯಕ ಸಂದೀಪ್ ವಿರುದ್ಧ ಗೌತಮ್, ಪುತ್ರಿ ಅರ್ಚನಾಗೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಿಸಿದ್ದರು. ಇದೀಗ ಸಂದೀಪ್ ಬೆಂಬಲಿಗರೇ ಅರ್ಚನಾ ಮತ್ತು ಅವರ ತಂದೆಯ ಮೇಲೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net