

Actor Vishal: ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ಗೆ ಸಂಬಂಧಿಸಿದ ವಿಡಿಯೋವೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಭಾರಿ ಚರ್ಚೆ ಹುಟ್ಟುಹಾಕಿದೆ. ಏಕೆಂದರೆ, ವಿಶಾಲ್ ಅವರು ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ಕಾಣುತ್ತದೆ. ಮೈಕ್ ಹಿಡಿದು ಮಾತನಾಡುವಾಗ ಕೈ ನಡುಗುತ್ತಿರುವುದು ಮತ್ತು ಮಾತುಗಳು ತೊದಲಿಸುತ್ತಿರುವುದು ವಿಡಿಯೋದಲ್ಲಿದೆ. ಹೀಗಾಗಿ ವಿಶಾಲ್ಗೆ ಏನಾಗಿದೆ ಎಂಬ ಪ್ರಶ್ನೆ ಮೂಡಿದೆ.
ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟರಾಗಿರುವ ವಿಶಾಲ್, 12 ವರ್ಷಗಳ ಹಿಂದೆ ಮದಗಜರಾಜ ಎಂಬ ಚಿತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ ಮುಂಬರುವ ಪೊಂಗಲ್ ಹಬ್ಬದಂದು ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವರಲಕ್ಷ್ಮೀ ಶರತ್ಕುಮಾರ್, ಅಂಜಲಿ ಹಾಗೂ ಸಂತಾನಮ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.
2013ರ ಪೊಂಗಲ್ಗೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತು. ಇದೀಗ 12 ವರ್ಷಗಳ ನಂತರ ಪೊಂಗಲ್ಗೆ ಚಿತ್ರ ತೆರೆಕಾಣುತ್ತಿದೆ. ನಿನ್ನೆ ಚೆನ್ನೈನಲ್ಲಿ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಈ ವೇಳೆ ನಟ ವಿಶಾಲ್, ನಿರ್ದೇಶಕ ಸುಂದರ್ ಸಿ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶಾಲ್ ಅವರು ಮೈಕ್ ಹಿಡಿಯಲು ಸಾಧ್ಯವಾಗದೆ ನಡುಗುವ ಕೈಗಳಿಂದಲೇ ತೊದಲುತ್ತಾ ಮಾತನಾಡಿದರು. ಅಲ್ಲದೆ, ಅವರ ದೇಹ ತುಂಬಾ ತೆಳ್ಳಗೆ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ ಅಭಿಮಾನಿಗಳು ಶಾಕ್ ಆಗಿದ್ದರು ಮತ್ತು ವಿಶಾಲ್ಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು.
ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ನಟ ವಿಶಾಲ್ಗೆ ವೈರಲ್ ಜ್ವರ ಇರುವುದು ದೃಢಪಟ್ಟಿದೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ತಿಳಿಸಲಾಗಿದೆ.
ವಿಶಾಲ್ ಅವರಿಗೆ ಗಂಭೀರವಾದ ಸಮಸ್ಯೆ ಏನಿಲ್ಲ. ಜ್ವರದಿಂದ ಮಾತ್ರ ಬಳಲುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿಯೂ ಬಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ತಿಳಿದ ಅಭಿಮಾನಿಗಳು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್)