ಮಿಸ್ ಯೂ ಅಪ್ಪು ಸರ್; ಪುನೀತ್ ವ್ಯಕ್ತಿತ್ವ ಸ್ಫೂರ್ತಿ ಎಂದ ತಮಿಳು ನಟ ವಿಶಾಲ್

Vishal Appu
Published on
ತಮಿಳು ನಟ ವಿಶಾಲ್ ಶನಿವಾರ ಮೈಸೂರಿಗೆ ಬಂದಿದ್ದರು. ಶಕ್ತಿಧಾಮದ ಮಕ್ಕಳನ್ನು ಭೇಟಿಯಾದರು. ಕೆಲ ಸಮಯ ಅವರ ಜತೆ ಬೆರೆತು ಮಾತನಾಡಿದರು. ಇದೇ ಸಮಯದಲ್ಲಿ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕ ಅವರು, ಪುನೀತ್ ರಾಜ್​ಕುಮಾರ್ ಜತೆಗಿನ ಗೆಳೆತನ, ದಕ್ಷಿಣ ವರ್ಸಸ್ ಬಾಲಿವುಡ್, ಪೈರಸಿ ವಿರುದ್ಧದ ಹೋರಾಟ, ಅವರ ಮುಂದಿನ ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

| ಹರ್ಷವರ್ಧನ್ ಬ್ಯಾಡನೂರು

  • ಹೇಳಿದಂತೆಯೇ ಶಕ್ತಿಧಾಮ ಮಕ್ಕಳನ್ನು ಭೇಟಿಯಾದಿರಿ?

- ಹೌದು, ಶಕ್ತಿಧಾಮದ ಮಕ್ಕಳನ್ನು ಭೇಟಿಯಾಗಲು ಹಲವು ದಿನಗಳಿಂದ ಕಾಯುತ್ತಿದ್ದೆ. ಆದರೆ, ಕೆಲಸದ ಒತ್ತಡದ ಮಧ್ಯೆ ಸಾಧ್ಯವಾಗಿರಲಿಲ್ಲ. ಬರುವ ಮುಂಚೆ ಶಿವಣ್ಣ ಅವರಿಗೂ ಕರೆ ಮಾಡಿದ್ದೆ. ಅವರು ಸೆ. 15ರಂದು ಬನ್ನಿ, ನಾನೂ ಮೈಸೂರಿನಲ್ಲಿರುತ್ತೇನೆ. ಇಬ್ಬರೂ ಹೋಗೋಣ ಎಂದರು. ಆದರೆ, ಆ ಸಮಯದಲ್ಲಿ ನನಗೆ ಸಿನಿಮಾ ಚಿತ್ರೀಕರಣವಿದ್ದ ಕಾರಣ, ತಡ ಮಾಡುವುದು ಬೇಡ ಅಂತ ಬಂದೆ. ದೀಪಾವಳಿ ಸಮಯದಲ್ಲಿ ಮತ್ತೆ ಶಿವಣ್ಣ ಜತೆ ಮಕ್ಕಳನ್ನು ಭೇಟಿಯಾಗಬೇಕು ಅಂತಂದುಕೊಂಡಿದ್ದೇನೆ. ಶಕ್ತಿಧಾಮ ಮಕ್ಕಳು ಪ್ರತಿಭಾವಂತರು, ಬುದ್ಧಿವಂತರು. ಸುಮಾರು ಮುಕ್ಕಾಲು ತಾಸು ಅವರ ಜತೆಗಿದ್ದೆ, ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.

  • ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಲಿದ್ದೀರಾ?

- ಅಶ್ವಿನಿ ಅವರನ್ನು ಭೇಟಿಯಾಗಿ ತುಂಬ ದಿನಗಳಾಗಿವೆ. ಅವರನ್ನೂ ಮುಂದಿನ ತಿಂಗಳು ಇಲ್ಲಿಗೆ ಬಂದಾಗ ಭೇಟಿಯಾಗಲಿದ್ದೇನೆ. ಆದರೆ, ಶಿವಣ್ಣ ಜತೆ ಫೋನ್ ಮೂಲಕ ಯಾವಾಗಲೂ ಸಂಪರ್ಕದಲ್ಲಿದ್ದೇನೆ.

  • ಪೈರಸಿಯನ್ನೇಕೆ ಬ್ಯಾನ್ ಮಾಡುತ್ತಿಲ್ಲ?

- ವಿಶಾಲ್, ತಮಿಳುನಾಡು ನಿರ್ವಪಕರ ಸಂಘದ ಅಧ್ಯಕ್ಷರಾಗಿದ್ದಾಗ ಪೈರಸಿ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಆದರೆ, ಈಗ ಕರೋನಾ ಬಳಿಕ ಪೈರಸಿ ಕಾಟ ಮತ್ತಷ್ಟು ಹೆಚ್ಚಾಗಿದೆ. ಈ ಕುರಿತು ಮಾತನಾಡುವ ಅವರು, ‘ಸರ್ಕಾರ ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಪೈರಸಿಯನ್ನು ಮಟ್ಟ ಹಾಕಬಹುದು. ಸುಮಾರು ಐದು ವರ್ಷ ನಾನು ಮತ್ತು ನನ್ನ ತಂಡ ಸೇರಿ ಪೈರಸಿ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಆದರೆ, ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಫೈಲ್ ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ನಾನೊಬ್ಬನೇ ಏನು ಮಾಡಲು ಸಾಧ್ಯ? ಪಾರ್ನ್ ಸೈಟ್​ಗಳನ್ನು ಬ್ಯಾನ್ ಮಾಡುವ ಸರ್ಕಾರ ಪೈರಸಿ ಸೈಟ್​ಗಳನ್ನು ಯಾಕೆ ಬ್ಯಾನ್ ಮಾಡುತ್ತಿಲ್ಲ?’ ಎಂದು ಅವರು ಪ್ರಶ್ನಿಸುತ್ತಾರೆ.

  • ಶಕ್ತಿಧಾಮಕ್ಕೆ ನೆರವು ನೀಡುವುದಾಗಿ ತಿಳಿಸಿದ್ದಿರಿ?

- ಹೌದು, ಈ ಬಗ್ಗೆ ಶಿವಣ್ಣ ಜತೆ ಮಾತನಾಡುತ್ತಿದ್ದೇನೆ. ಅವರು ಏನು ಹೇಳಿದರೂ ಹಾಗೆ ಮಾಡಲು ಸಿದ್ಧ. ಒಬ್ಬ ಸ್ವಯಂಸೇವಕನಾಗಿ ಶಕ್ತಿಧಾಮದ ಜತೆ ನಿಲ್ಲುತ್ತೇನೆ. ದೀಪಾವಳಿ ಹಬ್ಬಕ್ಕೆ ಮತ್ತೆ ಬರುತ್ತೇನೆ.

  • ಪುನೀತ್ ರಾಜಕುಮಾರ್​ರನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ?

- ಅಪ್ಪು ಸರ್ ಹೆಸರು ಕೇಳಿದರೇ ಹೃದಯ ಭಾರವಾಗುತ್ತದೆ. ಒಬ್ಬ ನಟನಾಗಿ, ಅವರ ಸಿನಿಮಾಗಳಿಂದ ಮಾತ್ರವಲ್ಲ ಅವರ ವ್ಯಕ್ತಿತ್ವ ಎಂಥವರಿಗೂ ಸ್ಪೂರ್ತಿ. ಅವರನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ಬೆಂಗಳೂರಿಗೆ ಬಂದಾಗೆಲ್ಲ ಅವರನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಸಿನಿಮಾ ಕಾರ್ಯಕ್ರಮಗಳಲ್ಲೂ ಆಗಾಗ ಭೇಟಿಯಾಗುತ್ತಿದ್ದೆ. ಒಳ್ಳೆಯವರನ್ನೇ ದೇವರು ತನ್ನ ಬಳಿ ಕರೆದುಕೊಂಡುಬಿಡುತ್ತಾನೆ.

  • ಬಾಲಿವುಡ್ ವರ್ಸಸ್ ದಕ್ಷಿಣ ಚಿತ್ರರಂಗ ಎಂಬುದು ಕೆಲ ತಿಂಗಳಿಂದೀಚಿಗೆ ತುಂಬ ಚರ್ಚೆಯಾಗುತ್ತಿದೆ?

- ನಾನು ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಹೋದಾಗ, ಅಲ್ಲಿನವರು ನೀವು ಬಾಲಿವುಡ್​ನವರಾ ಎಂದು ಕೇಳಿದರೆ ನಾನು ಭಾರತೀಯ ಚಿತ್ರರಂಗದವನು ಎನ್ನುತ್ತಿದ್ದೆ. ಭಾರತ ಅಂದರೆ ಹಿಂದಿ ಚಿತ್ರರಂಗ ಮಾತ್ರವಲ್ಲ ಬೆಂಗಾಲಿ, ಗುಜರಾತಿ, ಮರಾಠಿ ಚಿತ್ರರಂಗಗಳೂ ಇವೆ. ಇಷ್ಟು ದಿನ ಬಾಲಿವುಡ್​ನವರ ಸಮಯವಾಗಿತ್ತು. ಈಗ ದಕ್ಷಿಣ ಭಾರತೀಯರ ಸಮಯ ಬಂದಿದೆ ಎನ್ನಬಹುದು.

  • ‘ಲಾಠಿ’ ಹಾಗೂ ‘ಮಾರ್ಕ್ ಆಂಟನಿ’ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

- ‘ಲಾಠಿ’ ಚಿತ್ರೀಕರಣ ಪೂರ್ಣಗೊಂಡಿದೆ, ಸದ್ಯ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಸಾಹಸ ನಿರ್ದೇಶಕ ಪೀಟರ್ ಹೀನ್ಸ್ ಜತೆ ಮೊದಲ ಬಾರಿ ಕೆಲಸ ಮಾಡಿದ್ದೇನೆ. ಆಕ್ಷನ್ ಅಂತೂ ಅದ್ಭುತವಾಗಿ ಮೂಡಿಬಂದಿದೆ. ನಾನಿಲ್ಲಿ ಒಬ್ಬ ಕಾನ್​ಸ್ಟೆಬಲ್ ಪಾತ್ರದಲ್ಲಿ ನಟಿಸಿದ್ದೇನೆ. ಇದುವರೆಗೆ ಕಮಿಷನರ್, ಡಿಸಿಪಿ ರೀತಿ ಪೊಲೀಸ್ ಅಧಿಕಾರಿಗಳ ಪ್ರಧಾನ ಚಿತ್ರಗಳು ಬಂದಿದ್ದವು. ಆದರೆ, ಇದು ಒಬ್ಬ ಧೈರ್ಯವಂತ, ಬುದ್ಧಿವಂತ ಪೇದೆಯ ಕುರಿತ ಚಿತ್ರ. ಅಧಿಕಾರಿಗಳು ಆದೇಶ ನೀಡುತ್ತಾರೆ, ಕಾನ್ಸ್​ಟೆಬಲ್​ಗಳು ನಿಜವಾಗಿ ಕೆಲಸ ಮಾಡುವವರು. ಅವರ ಬಳಿ ಪಿಸ್ತೂಲ್ ಸಹ ಇರುವುದಿಲ್ಲ. ಕೇವಲ ಲಾಠಿ ಹಿಡಿದುಕೊಂಡು ಕೆಲಸ ಮಾಡಬೇಕು. ಈ ಚಿತ್ರವನ್ನು ತಮಿಳುನಾಡು ಮತ್ತು ಕರ್ನಾಟಕದ ಎಲ್ಲ ಕಾನ್ಸ್​ಟೆಬಲ್​ಗಳಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಇನ್ನು, ‘ಮಾರ್ಕ್ ಆಂಟನಿ’ ನನ್ನ ಚಿತ್ರಜೀವನದ ಅತಿ ದೊಡ್ಡ ಬಜೆಟ್​ನ ಚಿತ್ರ. ಇದು ಸೈಫೈ ಚಿತ್ರವಾಗಿದ್ದು, 1960ರ ಅಪ್ಪ ಹಾಗೂ 1990ರ ಮಗ ... ಹೀಗೆ ಎರಡು ಪಾತ್ರಗಳಲ್ಲೂ ನಟಿಸುತ್ತಿದ್ದೇನೆ. ನನ್ನ ಬಹುತೇಕ ಚಿತ್ರಗಳು ಹಿಂದಿಯಲ್ಲಿ ಡಬ್ ಆಗಿವೆ. ಹೀಗಾಗಿಯೇ ಈ ಎರಡೂ ಚಿತ್ರಗಳನ್ನು ಹಿಂದಿಯಲ್ಲಿ ನೇರವಾಗಿ ಬಿಡುಗಡೆ ಮಾಡಲಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net