ವೇದಿಕೆ ಮೇಲೆ ಪ್ರಜ್ಞೆ ತಪ್ಪಿ ಬಿದ್ದ ವಿಶಾಲ್​: ಇದು 2ನೇ ಬಾರಿ, ಸ್ಟಾರ್​ ನಟನಿಗಿರುವ ಆರೋಗ್ಯ ಸಮಸ್ಯೆ ಏನು? Actor Vishal

Actor Vishal
Published on

Actor Vishal : ಕಾಲಿವುಡ್ ನಟ ವಿಶಾಲ್ ಮತ್ತೊಮ್ಮೆ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶಾಲ್​, ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಶಾಲ್​ಗೆ ಏನಾಗಿದೆ ಎಂದು ಅಭಿಮಾನಿಗಳು ಬಹಳ ಚಿಂತಿತರಾಗಿದ್ದಾರೆ.

ತಮಿಳುನಾಡಿನ ವಿಲ್ಲುಪುರಂನ ಕೂವಾಗಮ್ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಕಳೆದ ಕೆಲವು ದಿನಗಳಿಂದ ಚಿತ್ತಿರೈ (ತಮಿಳು ಮಾಸ) ಆಚರಣೆಗಳು ನಡೆಯುತ್ತಿವೆ. ವಿಶಾಲ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಭಾನುವಾರ (ಮೇ 11) ಆಯೋಜಕರು ಮಿಸ್ ಕೂವಾಗಮ್​ ತೃತೀಯ ಲಿಂಗಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ಸ್ವಲ್ಪ ಸಮಯದ ನಂತರ ವೇದಿಕೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರು.

ತಕ್ಷಣ, ವಿಶಾಲ್​ ಅವರ ತಂಡ ಹಾಗೂ ಮಾಜಿ ಸಚಿವ ಕೆ. ಪೊನ್ಮುಡಿ ಮತ್ತು ಕಾರ್ಯಕ್ರಮ ಆಯೋಜಕರು ವಿಶಾಲ್​ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಸದ್ಯಕ್ಕೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ, ವಿಶಾಲ್​ ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಶಾಲ್‌ಗೆ ಇದು ಎರಡನೇ ಬಾರಿ ಸಂಭವಿಸಿದೆ. 'ಮದ ಗಜ ರಾಜ' ಚಿತ್ರದ ಪ್ರಚಾರದ ಸಮಯದಲ್ಲಿ ವಿಶಾಲ್ ಅವರ ಕೈಗಳು ನಡುಗುತ್ತಿತ್ತು. ಅಷ್ಟೇ ಅಲ್ಲದೆ, ತುಂಬಾ ಅಸ್ವಸ್ಥರಾಗಿರುವಂತೆ ಕಾಣುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿ, ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಆದರೆ, ಆ ಸಮಯದಲ್ಲಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ವಿಶಾಲ್​ ಅವರ ತಂಡ ನಂತರದಲ್ಲಿ ತಿಳಿಸಿತು. ಆದರೆ, ಈಗ ಅವರು ಪ್ರಜ್ಞೆ ಕಳೆದುಕೊಂಡಿದ್ದಕ್ಕೆ ಕಾರಣ ಏನೆಂದು ತಿಳಿದಿಲ್ಲ. ಹೀಗಾಗಿ ವಿಶಾಲ್​ ಅವರಲ್ಲಿ ಏನೋ ಆರೋಗ್ಯ ಸಮಸ್ಯೆ ಇದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net