ನಟ ವಿಶಾಲ್​ಗೆ ಬಿಗ್​ ಶಾಕ್​: ಬಡ್ಡಿ ಸಮೇತ 21 ಕೋಟಿ ರೂ. ಪಾವತಿಸುವಂತೆ ಕೋರ್ಟ್​ ಆದೇಶ! Actor Vishal

Actor Vishal
Published on

Actor Vishal : ಕಾಲಿವುಡ್​ ಸ್ಟಾರ್ ಹೀರೋ ವಿಶಾಲ್​ಗೆ ಮದ್ರಾಸ್ ಹೈಕೋರ್ಟ್ ಇಂದು (ಜೂನ್​ 05) ಬಿಗ್ ಶಾಕ್ ನೀಡಿದೆ. ಪ್ರಸಿದ್ಧ ಕಾಲಿವುಡ್ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್​ಗೆ ಶೇ.30 ರಷ್ಟು ಬಡ್ಡಿಯೊಂದಿಗೆ 21 ಕೋಟಿ ರೂ. ಪಾವತಿಸಲು ಆದೇಶ ಹೊರಡಿಸಿದೆ.

ಎರಡೂವರೆ ವರ್ಷಗಳ ವಿಚಾರಣೆಯ ನಂತರ, ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ವಿಶಾಲ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವೆ ಹಣದ ವಿಚಾರದಲ್ಲಿ ಸ್ವಲ್ಪ ಸಮಯದಿಂದ ಜಗಳ ನಡೆಯುತ್ತಿತ್ತು. 2022ರಲ್ಲಿ, ಲೈಕಾ ಪ್ರೊಡಕ್ಷನ್ಸ್, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿ, ವಿಶಾಲ್ ಚಿತ್ರ ನಿರ್ಮಿಸಲು ತಮ್ಮಿಂದ 21.29 ಕೋಟಿ ರೂ. ಸಾಲ ಪಡೆದು ಇನ್ನೂ ಹಣವನ್ನು ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿತ್ತು.

ಹಣ ಹಿಂದಿರುಗಿಸುವವರೆಗೆ ವಿಶಾಲ್ ನಿರ್ಮಿಸಿದ ಚಿತ್ರದ ಹಕ್ಕುಗಳನ್ನು ಉಳಿಸಿಕೊಳ್ಳುವ ಒಪ್ಪಂದವನ್ನು ಲೈಕಾ ಮಾಡಿಕೊಂಡಿತ್ತು. ಆದಾಗ್ಯೂ, ವಿಶಾಲ್ 'ವೀರಮೆ ವಾಗೈ ಚೂಡಂ' ಚಿತ್ರದ ಹಕ್ಕುಗಳನ್ನು ಲೈಕಾ ಬದಲಿಗೆ ಬೇರೆ ಕಂಪನಿಗೆ ಮಾರಾಟ ಮಾಡಿದರು. ಇದರ ಪರಿಣಾಮವಾಗಿ, ಲೈಕಾ ಚೆನ್ನೈ ಹೈಕೋರ್ಟ್ ಮೊರೆ ಹೋಗಿತ್ತು. ಅಂದಿನಿಂದ ಪ್ರಕರಣ ಮುಂದುವರೆದಿತ್ತು. ಅಂತಿಮವಾಗಿ ಇಂದು ತೀರ್ಪು ನೀಡಲಾಗಿದೆ.

ಇದಕ್ಕೂ ಮೊದಲು, ಈ ಪ್ರಕರಣದ ಸಂಬಂಧಿತ ವಿಚಾರಣೆಯಲ್ಲಿ ಮದ್ರಾಸ್ ಹೈಕೋರ್ಟ್, ವಿಶಾಲ್‌ಗೆ 15 ಕೋಟಿ ರೂ. ಠೇವಣಿ ಇಡುವಂತೆ ಆದೇಶಿಸಿತ್ತು. ಹಣ ಪಾವತಿಸದಿದ್ದರೆ, ವಿಶಾಲ್ ಅವರ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಅಥವಾ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಆದೇಶಿಸಲಾಗಿತ್ತು. ಪ್ರಕರಣ ಇಂದು ವಿಚಾರಣೆಗೆ ಬಂದಿದ್ದು, ನ್ಯಾಯಮೂರ್ತಿ ಪಿ.ಡಿ. ಆಶಾ ಪ್ರಕರಣದಲ್ಲಿ ತೀರ್ಪು ನೀಡಿದ್ದಾರೆ. ಅದರಂತೆ, ಲೈಕಾಗೆ ನೀಡಬೇಕಿದ್ದ 21.29 ಕೋಟಿ ರೂ.ಗಳನ್ನು 30% ಬಡ್ಡಿಯೊಂದಿಗೆ ಮರುಪಾವತಿಸುವಂತೆ ವಿಶಾಲ್ ಅವರಿಗೆ ಆದೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net