

ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ಸೂರ್ಯ ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಖರೀದಿ ಮಾಡಿ ಅಲ್ಲಿಗೆ ಸ್ಥಳಾಂತರವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಚರ್ಚೆಯಾಗಿತ್ತು. ಅಲ್ಲದೆ, ಈ ಸುದ್ದಿ ಸೂರ್ಯ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೂ ನೀಡಿತ್ತು. ಇದೀಗ ಈ ವಿಚಾರವಾಗಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಸೂರ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ಸೂರ್ಯ ಅವರು ಮುಂಬೈ ವಾಸದ ಬಗ್ಗೆ ಮಾತನಾಡಿದ್ದಾರೆ. ಇದೊಂದು ವಂದತಿಯಷ್ಟೇ. ಈ ಸುದ್ದಿ ನಿಜವಲ್ಲ. ನನ್ನ ಮಗ ಮತ್ತು ಮಗಳು ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ನಾವು ತಮಿಳುನಾಡಿನಲ್ಲಿ ವಾಸವಿದ್ದೇವೆ. ನನಗೆ ಒಳ್ಳೆಯ ಮಗ, ಒಳ್ಳೆಯ ತಂದೆ ಮತ್ತು ಒಳ್ಳೆಯ ಪತಿಯಾಗಬೇಕೆಂದು ಬಯಸುತ್ತೇನೆ. ಅವರನ್ನು ನೋಡಲು ನಾನು ಮತ್ತು ನನ್ನ ಪತ್ನಿ ಮುಂಬೈ ಹೋಗುತ್ತೇವೆ ಅಷ್ಟೇ. ಆದರೆ, ಅಲ್ಲಿಗೆ ಸ್ಥಳಾಂತರವಾಗಿದ್ದೇವೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಜೀವನದಲ್ಲಿ ಹೊಸತನ್ನು ಕಲಿಯಬೇಕೆಂಬ ಹಂಬಲದಿಂದ ನಟ ಮಾಧವನ್ ಜತೆ ಕೆಲ ದಿನಗಳಿಂದ ಗಾಲ್ಫ್ ಆಡುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸೂರ್ಯ ವಿವರಿಸಿದರು. ಸೂರ್ಯ ಅವರ ಮಾತುಗಳನ್ನು ಕೇಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸೂರ್ಯ ಅವರು ಖ್ಯಾತ ನಿರ್ದೇಶಕ ಶಿವ ನಿರ್ದೇಶನದ ಕಂಗುವಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ದೊಡ್ಡ ಬಜೆಟಿನ ಸಿನಿಮಾ. ಈ ಚಿತ್ರದಲ್ಲಿ ಸೂರ್ಯ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಡ್ರಾಮ ಆಧಾರಿತ ಸಿನಿಮಾ ಆಗಿದೆ. ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಅಭಿನಯಿಸಿದ್ದಾರೆ. ಈ ಸಿನಿಮಾ 3ಡಿಯಲ್ಲಿ ಮೂಡಿಬರಲಿದೆ. ಮುಂದಿನ ವರ್ಷ 10 ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. (ಏಜೆನ್ಸೀಸ್)