

ಬೆಂಗಳೂರು: ‘ಇರುವುದೆಲ್ಲವ ಬಿಟ್ಟು’ ಮತ್ತು ‘ಗಜಾನನ ಆ್ಯಂಡ್ ಗ್ಯಾಂಗ್’ ಚಿತ್ರದಲ್ಲಿ ನಟಿಸಿದ್ದ ಶ್ರೀ, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅದೇ ‘ಅರಿಹ’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ನಿರ್ದೇಶಕ ಆದರ್ಶ ಈಶ್ವರಪ್ಪ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ಅರಿಹ’ ಎಂದರೆ ದುಷ್ಟಶಕ್ತಿಗಳನ್ನು ನಾಶ ಮಾಡುವ ಶಕ್ತಿ ಇರುವವನು ಎಂಬ ಅರ್ಥ ಇದೆ ಎಂದು ಮಾತು ಶುರು ಮಾಡಿದ ಶ್ರೀ, ‘ಇದೊಂದು ಥ್ರಿಲ್ಲರ್ ಚಿತ್ರ. ಒಂದು ಕಥೆಯನ್ನು ಈ ರೀತಿ ತೋರಿಸಬಹುದು ಎಂದು ಹೇಳಿದ್ದು ಬಹಳ ಖುಷಿಕೊಟ್ಟಿತು. ಬಹಳ ಚೆನ್ನಾಗಿ ಈ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಆಕಾಶ್’ ಎಂದು ಹೇಳಿಕೊಂಡರು.
ಈ ಚಿತ್ರದಲ್ಲಿ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಿಂದೆ ಕೆಲವು ಕಿರುಚಿತ್ರಗಳನನ್ನು ನಿರ್ದೇಶಿಸಿದ್ದ ಮೋಹನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದು, ಮಿಕ್ಕಂತೆ ಅಚ್ಯುತ್ ಕುಮಾರ್, ಶೋಭರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.