

ಬೆಂಗಳೂರು: ‘ಮತ್ತೆ ಹೊಸದಾಗಿ ಬರುತ್ತಿದ್ದೇನೆ. ಮೊದಲ ಸಿನಿಮಾ ಬಿಡುಗಡೆ ಆಗುತ್ತಿದೆಯೆನೋ ಎಂಬ ಭಾವ ನನ್ನನ್ನು ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಸಿನಿಮಾ ಕ್ಷೇತ್ರವೇ ಬಂದ್ ಆಗಿತ್ತು. ಹಾಗಾಗಿ, ಹೊಸಬನ ಥರ ಎಂಟ್ರಿ ಆಗುತ್ತಿದ್ದೇನೆ ಎಂದೆನಿಸುತ್ತಿದೆ’- ಹೀಗೆ ಎರಡು ವರ್ಷದ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ನಿರರ್ಗಳವಾಗಿ ಮಾತನಾಡಿದರು ನಟ ಶರಣ್.
ಅವರ ಈ ಆಗಮನಕ್ಕೆ ಕಾರಣ ‘ಅವತಾರ ಪುರುಷ’. ಡಿ. 10ಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಶರಣ್ ಕಾಂಬಿನೇಷನ್ನ ಮೊದಲ ಸಿನಿಮಾ ಇದು. ಪೋಸ್ಟರ್, ಟೀಸರ್ ಮೂಲಕವೇ ಈಗಾಗಲೇ ಗಮನ ಸೆಳೆದಿದ್ದ ‘ಅವತಾರ ಪುರುಷ’ ಚಿತ್ರ, ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಹತ್ತು ಹಲವು ಅವತಾರವನ್ನು ಪ್ರೇಕ್ಷಕರಿಗೆ ತೋರಿಸಲಿದೆ.
ನನಗಿಲ್ಲಿ ಎಲ್ಲವೂ ಹೊಸತೇ: ‘ಸುನಿ ನಿರ್ದೇಶನದಲ್ಲಿ ನನ್ನದು ಮೊದಲ ಸಿನಿಮಾ. ಪುಷ್ಕರ್ ಅವರ ಬ್ಯಾನರ್ನಲ್ಲಿಯೂ ಮೊದಲ ಸಿನಿಮಾ. ಈ ತರಹದ ಚಿತ್ರವೂ ನನಗೆ ಹೊಸದು. ನನ್ನ ವೃತ್ತಿ ಜೀವನದಲ್ಲಿಯೂ ದೊಡ್ಡ ಬಜೆಟ್ನ ಚಿತ್ರವೂ ಇದೇ ಆಗಿದೆ. ಈ ಚಿತ್ರದಲ್ಲಿ ನನಗೆ ಸಿಕ್ಕ ಹತ್ತು ಹಲವು ಪಾತ್ರವೂ ಇದೇ ಮೊದಲು. ಹೀಗೆ ಹಲವು ಹೊಸತುಗಳಿಗೆ ‘ಅವತಾರ ಪುರುಷ’ ಸಾಕ್ಷಿಯಾಗಿದೆ. ನನ್ನೊಳಗಿನ ನಟನನ್ನು ಈ ಚಿತ್ರ ಮತ್ತಷ್ಟು ಸಾಣೆ ಹಿಡಿಸಿದೆ’ ಎಂಬುದು ಶರಣ್ ಮಾತು. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ವಿಲಿಯಮ್ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
101 ದಿನಕ್ಕೆ ಭಾಗ-2: ‘ಅವತಾರ ಪುರುಷ’ ಚಿತ್ರ ಎರಡು ಭಾಗಗಳಲ್ಲಿ ಮೂಡಿಬಂದಿದೆ. ಮೊದಲ ಭಾಗ ಡಿ. 10ಕ್ಕೆ ಬಂದರೆ, ಎರಡನೇ ಭಾಗದ ಬಿಡುಗಡೆ ಯಾವಾಗ? ಈ ಪ್ರಶ್ನೆಗೂ ಉತ್ತರ ಲಭ್ಯವಾಗಿದೆ. ಮೊದಲ ಚಿತ್ರ ಬಿಡುಗಡೆಯಾಗಿ 101ನೇ ದಿನಕ್ಕೆ 2ನೇ ಭಾಗ ತೆರೆಗೆ ಬರಲಿದೆ ಎಂದು ನಿರ್ವಪಕ ಪುಷ್ಕರ್ ತಿಳಿಸಿದ್ದಾರೆ.