

ಮಾದಕ ನಟಿ ಶ್ರದ್ಧಾ ಕಪೂರ್ ಮದುವೆಯಂತೆ! ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠರನ್ನು ಮದುವೆ ಆಗ್ತಾರಂತೆ ಎಂಬ ವದಂತಿ ಬಾಲಿವುಡ್ ಸರ್ಕಲ್ನಲ್ಲಿ ಸದ್ಯ ಓಡಾಡುತ್ತಿದೆ. ನಾವಿಬ್ರು ಒಳ್ಳೆ ಫ್ರೆಂಡ್ಸ್ ಎಂದು ಹಿಂದೆ ಹಲವು ಬಾರಿ ಹೇಳಿರುವ ಶ್ರದ್ಧಾ, ಹೊಸ ವದಂತಿ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ, ಶ್ರದ್ಧಾ ತಂದೆ, ಬಾಲಿವುಡ್ನ ಪ್ರಖ್ಯಾತ ಖಳನಟ ಶಕ್ತಿ ಕಪೂರ್ಗಂತೂ ಇದು ಸ್ವಲ್ಪ ತಲೆ ನೋವು ತಂದಿದೆ.
ಸಂದರ್ಶನವೊಂದರಲ್ಲಿ ಮಗಳ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಶಕ್ತಿ, ಶ್ರದ್ಧಾ ಮದುವೆಗೆ ಸಿದ್ಧಳಾಗಿದ್ದಾಳೆಂದರೆ ನನ್ನ ಅಭ್ಯಂತರವೇನೂ ಇಲ್ಲ. ಈ ಕಾಲದಲ್ಲಿ ಅಪ್ಪ-ಅಮ್ಮನಿಗೆ ಹೆಚ್ಚೇನೂ ಕೆಲಸ ಇರುವುದಿಲ್ಲ. ಎಲ್ಲವನ್ನೂ ಮಕ್ಕಳೇ ನಿರ್ಧರಿಸಿಬಿಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ, ಭಯವಾಗುತ್ತದೆ. ಹಾಗಾಗಿ ಬಾಳಸಂಗಾತಿ ಆಯ್ಕೆ ಮಾಡುವಾಗ ಹೆಚ್ಚಿನ ವಿವೇಚನೆ ಅಗತ್ಯ ಎಂದಷ್ಟೇ ಮಗಳಿಗೆ ಸಲಹೆ ನೀಡಬಯಸುತ್ತೇನೆ ಎಂದಿದ್ದಾರೆ.