ಕ್ಯಾನ್ಸರ್ ಗೆದ್ದುಬಂದ ಸಂಜಯ್ ದತ್

Sanjay Dutt - Final
Published on

ಮುಂಬೈ: ಎರಡು ತಿಂಗಳ ಹಿಂದೆಯಷ್ಟೇ, ಬಾಲಿವುಡ್ ನಟ ಸಂಜಯ್ ದತ್ ನಾಲ್ಕನೇ ಹಂತದ ಲಂಗ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇನ್ನೇನು ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳಲಿದ್ದಾರೆ ಎಂಬ ಸುದ್ದಿಯಾಗಿತ್ತು. ಈಗ ಖುದ್ದು ಸಂಜಯ್ ದತ್, ತಾವು ಕ್ಯಾನ್ಸರ್ ಗೆದ್ದು ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ.

‘ಕಳೆದ ಕೆಲವು ವಾರಗಳು, ನನ್ನ ಮತ್ತು ನನ್ನ ಕುಟುಂಬಕ್ಕೆ ಬಹಳ ಕಷ್ಟಕರವಾಗಿತ್ತು. ದೇವರು ತನ್ನ ಶಕ್ತಿಶಾಲಿ ಸೇನಾನಿಗಳಿಗೇ ಕಷ್ಟದ ಯುದ್ಧಗಳನ್ನು ಕೊಡುತ್ತಾನೆ ಎನ್ನುವಂತೆ, ಈ ಯುದ್ಧ ನನಗೆ ಎದುರಾಗಿತ್ತು. ನನ್ನ ಮಕ್ಕಳ 10ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಯುದ್ಧವನ್ನು ಗೆದ್ದುಬಂದಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಸಂತೋಷವಾಗುತ್ತದೆ. ಎಲ್ಲರ ಪ್ರೀತಿ, ಅಭಿಮಾನ ಮತ್ತು ನಂಬಿಕೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇಂಥ ಸಂದರ್ಭದಲ್ಲಿ ಜತೆಗೆ ನಿಂತ ನನ್ನ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಾನು ಆಭಾರಿ’ ಎಂದು ಸಂಜಯ್ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮಗೆ ಚಿಕಿತ್ಸೆ ನೀಡಿ, ಕ್ಯಾನ್ಸರ್ ಗೆದ್ದು ಬರುವುದಕ್ಕೆ ಕಾರಣಕರ್ತರಾದ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರಾದ ಡಾ. ಸೇವಂತಿ ಮತ್ತು ತಂಡದವರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಒಂದು ಕಡೆ, ಸಂಜಯ್ ದತ್ ತಾವು ಕ್ಯಾನ್ಸರ್ ಗೆದ್ದು ಬಂದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಪ್ರಮುಖವಾಗಿ, ಎರಡು ತಿಂಗಳಲ್ಲಿ ನಾಲ್ಕನೇ ಹಂತದ ಕ್ಯಾನ್ಸರ್​ನಿಂದ ಸಂಜಯ್ ಗುಣಮುಖರಾಗಿದ್ದು ಹೇಗೆ ಎಂಬ ಪ್ರಶ್ನೆಯ ಜತೆಗೆ, ಪ್ರಚಾರಕ್ಕಾಗಿ ಸಂಜಯ್ ದತ್ ಮಾಡಿರುವ ಸ್ಟಂಟ್ ಇದು ಎನ್ನುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net