ಗಾಯನಕ್ಕೂ ಸೈ ಎಂದ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ನಾಯಕ ಪೃಥ್ವಿ ಅಂಬರ್

collage (4)
Published on

ಬೆಂಗಳೂರು: ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ‘ಲೈಫ್ ಈಸ್ ಬ್ಯೂಟಿಫುಲ್‘ ಚಿತ್ರ ಇದೀಗ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಚಿತ್ರದ ನಾಯಕ ಪೃಥ್ವಿ ಅಂಬರ್, ಈ ಚಿತ್ರದಲ್ಲಿನ ಹಾಡೊಂದಕ್ಕೆ ಧ್ವನಿಯಾಗಿ, ಗಾಯಕನಾಗಿ ಬಡ್ತಿ ಪಡೆದಿದ್ದಾರೆ.

ಅಂದಹಾಗೆ, ಪೃಥ್ವಿಗೆ ಇದು ಮೊದಲ ಹಾಡು. ಈ ಹಿಂದೆ ಬೇರಾವ ಸಿನಿಮಾದಲ್ಲಿಯೂ ಅವರು ಹಾಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸುವ ಪೃಥ್ವಿ, ‘ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ್ಗೆ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾದಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜಾಕ್ಸನ್ ನನ್ನ ಅಚ್ಚುಮೆಚ್ಚಿನ ಕಲಾವಿದ. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಅದೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಮಾಡಿಕೊಟ್ಟಿದೆ‘ ಎನ್ನುತ್ತಾರೆ.

ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿ, ಮದನ್ ಬೆಳ್ಳಿಸಾಲು ಬರೆದ ಸಾಹಿತ್ಯಕ್ಕೆ ಪೃಥ್ವಿ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಅವರೇ ನಾಯಕನಾಗಿರುವುದರಿಂದ ಅವರಿಂದಲೇ ಹಾಡಿಸಿದರೆ, ಸೂಕ್ತ ಎಂಬ ಕಾರಣಕ್ಕೆ ತಂಡ ಈ ಪ್ರಯತ್ನ ಮಾಡಿತ್ತು. ಅದರಂತೆ ಹಾಡಿನ ರೆಕಾರ್ಡಿಂಗ್ ಮುಗಿದಿದೆ.

ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು. ಮಮ್ಮಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಅವರ ಪ್ರೈಡ್ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net