ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿದ ಸ್ಯಾಂಡಲ್​ವುಡ್ ನಿರ್ಮಾಪಕಿ

WhatsApp Image 2020-05-10 at 2.45.38 PM
Published on

ಎರಡ್ಮೂರು ತಿಂಗಳಿಂದ ಜೀವದ ಹಂಗು ತೊರೆದು, ಕರೊನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ವಿಶೇಷವಾಗಿ ಕೃತಜ್ಞತೆ ಹೇಳಿದ್ದಾರೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು. ಹೌದು, ಇಲ್ಲಿಯವರೆಗೂ ಹಸಿದವರಿಗೆ ಅಕ್ಕಿ ಸೇರಿ ವಿವಿಧ ಬಗೆಯ ದಿನಸಿ ವಸ್ತುಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಮತ್ತೆ ಕೆಲವರು ಊಟೋಪಚಾರದ ವ್ಯವಸ್ಥೆ ಕಲ್ಪಿಸುತ್ತಿದ್ದರು. ಇದೀಗ ನಿರ್ಮಾಪಕಿ ಶ್ರುತಿ ನಾಯ್ಡು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬೆಳ್ಳಿ ನಾಣ್ಯ ನೀಡಿದ್ದಾರೆ.

ಹೌದು, ಕರೊನಾ ವಾರಿಯರ್ಸ್​ಗಳಾದ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೃತಜ್ಞತೆಯ ರೂಪದಲ್ಲಿ 20 ಗ್ರಾಂನ ಬೆಳ್ಳಿ ನಾಣ್ಯವನ್ನು ವಿತರಿಸಿದ್ದಾರೆ. ಕರೊನಾ ಕಾರಣದಿಂದಾಗಿ ಹಸಿವಿನಿಂದ ಬಳಲುತ್ತಿದ್ದ ಅನೇಕ ಕುಟುಂಬಗಳಿಗೆ ಶ್ರುತಿ ನೆರವಾಗಿದ್ದಾರೆ. ಮೈಸೂರಿನ ಸಮೀಪದ ಕಾಡಂಚಿನ ಜನರಿಗೂ ಆಹಾರ ಕಿಟ್ ತಲುಪಿಸಿದ್ದರು. ತಮ್ಮದೇ ಒಡೆತನದ ಮೈಸೂರು ಮಿರ್ಚಿ ರೆಸ್ಟೋರೆಂಟ್ ಮೂಲಕವೂ ಜನರಿಗೆ ನೆರವಾಗಿದ್ದರು. ಈಗ ಮೈಸೂರಿನ ಕುವೆಂಪು ನಗರದ ನಿವಾಸಿ ಆಗಿರುವ ಶ್ರುತಿ ನಾಯ್ಡು ರವಿವಾರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ 90 ಜನ ಸಿಬ್ಬಂದಿಗೆ ಬೆಳ್ಳಿ ನಾಣ್ಯ ಇರುವ ಕೃತಜ್ಞತಾ ಬಾಕ್ಸ್ ವಿತರಣೆ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net