

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ ವಿಜೇತ ಹಾಗೂ ನಟ ಪ್ರಥಮ್ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ನೀಡಿರುವ ಬಗ್ಗೆ ಪ್ರಥಮ್ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ, ದರ್ಶನ್ ಅಭಿಮಾನಿಗಳಿಗೆ ಬುದ್ಧಿಮಾತು ಸಹ ಹೇಳಿದ್ದಾರೆ.
ಜೀವನ ದೊಡ್ಡದು, ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ನಾನು ಶಾಂತಿಯಿಂದಲೇ ಇದ್ದೆ. ಆದರೆ, ನೀವು ಅತಿಯಾಗಿ ನಮ್ಮ "ಕರ್ನಾಟಕದ ಅಳಿಯ" ಸಿನಿಮಾ ತಂಡದ ಕಚೇರಿ ನಂಬರ್ಗೆ ಕರೆ ಮಾಡಿ ಬೆದರಿಕೆ ಹಾಕುತಿದ್ದೀರಾ! ಇನ್ಮೇಲೆ ನನಗೆ ಬರುವ ಕರೆ, ಮೆಸೇಜ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಸೇರಿದಂತೆ ಎಲ್ಲವನ್ನು ಪೋಲೀಸರು ನೋಡಿಕೊಳ್ಳುತ್ತಾರೆ. ಬದುಕು ಸುಂದರವಾದದ್ದು ಅಂಧಾಭಿಮಾನಿಗಳೇ ಅದನ್ನು ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ ಎಂದು ಪ್ರಥಮ್ ಹೇಳಿದ್ದಾರೆ.
ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಗೇಕೆ ಸಿಟ್ಟು? ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಬಾಸ್ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಟ ಪ್ರಥಮ್ ಅವರನ್ನು ಖಾಸಗಿ ಸುದ್ದಿವಾಹಿನಿಯೊಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪ್ರಥಮ್, ಅನ್ನಪೂರ್ಣೇಶ್ವರಿ ನಗರ ಠಾಣೆ ನಮ್ಮ ಮನೆಯಿಂದ ಹತ್ತಿರದಲ್ಲಿದೆ. ಅಲ್ಲಿನ ಇನ್ಸ್ಪೆಕ್ಟರ್ ಅಥವಾ ಎಸಿಪಿಗೆ ಹೇಳಿ ಒಂದು ವಾರದ ಮಟ್ಟಿಗೆ ಪೊಲೀಸ್ ಕಾನ್ಸ್ಟೆಬಲ್ ಆಗಲು ನನಗೆ ಅನುಮತಿ ಕೊಡಿಸಿ, ನಗೆ ಸಂಬಳ ಕೊಡಬೇಕಾಗಿಲ್ಲ, ಒಂದು ದೊಣ್ಣೆ ಸಿಕ್ಕಿದರೆ ಸಾಕು ಸ್ಟೇಷನ್ ಮುಂದೆ ನಿಂತಿರುವವರಿಗೆಲ್ಲರಿಗೂ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಏಕೆಂದರೆ, ಅಲ್ಲಿರುವ ಒಬ್ಬ ಮಗಾನೂ ಅವರ ಅಮ್ಮನಿಗೆ ಒಂದು ಹೊತ್ತು ಹಿಟ್ಟು ಕೊಡಿಸುವ ಯೋಗ್ಯತೆ ಇಲ್ಲ. ಕೆಲವರು ಭ್ರಮೆಯಲ್ಲಿದ್ದಾರೆ. ನಮ್ಮಿಂದ ಟಿಆರ್ಪಿ ಮತ್ತು ನಮ್ಮ ಬಾಸ್ನಿಂದ ಟಿಆರ್ಪಿ ಬರುತ್ತೆ ಎಂಬ ಭ್ರಮಾ ಲೋಕದಲ್ಲಿ ಮುಳುಗಿದ್ದಾರೆ. ಇವರೆಲ್ಲ ವಾಟ್ಸ್ಆ್ಯಪ್ ಯೂನಿವರ್ಸಿಟಿ ಮಂದಿ, ಮಾಧ್ಯಮ ಹೇಗೆ ನಡೆಯುತ್ತದೆ ಎಂಬುದೇ ಗೊತ್ತಿಲ್ಲ ಎಂದು ದರ್ಶನ್ ಅಭಿಮಾನಿಗಳನ್ನು ಪ್ರಥಮ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಪ್ರಥಮ್ ಅವರ ಮಾತುಗಳಿಂದ ರೊಚ್ಚಿಗೆದ್ದಿರುವ ದರ್ಶನ್ ಅಭಿಮಾನಿಗಳು ಇದೀಗ ಪ್ರಥಮ್ ಅವರಿಗೆ ಜೀವ ಬೆದರಿಕೆ ಹಾಕುತ್ತಿದ್ದು, ತಕ್ಷಣ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಥಮ್ ದೂರು ದಾಖಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.