ಭೈರತಿಯಲ್ಲಿ ಉಗ್ರ ಪ್ರತಾಪ ; ಶಿವರಾಜಕುಮಾರ್​ಗೆ ವಿಭಿನ್ನ ಪಾತ್ರದಲ್ಲಿ ನಟನ ಟಕ್ಕರ್​

sdvsdvsdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಬೆಂಕಿಪಟ್ಣ', "ಗುರುದೇವ್​ ಹೊಯ್ಸಳ' ಸೇರಿ ಕಳೆದ ವಾರ ತೆರೆಗೆ ಬಂದ "ಮಾರ್ಟಿನ್​' ಚಿತ್ರದಲ್ಲೂ ನಟಿಸಿರುವ ಪ್ರತಾಪ್​ ನಾರಾಯಣ್​, ನಾಯಕನಾಗಿ ಮಾತ್ರವಲ್ಲ ಖಳನಾಯಕನಾಗಿಯೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ನರ್ತನ್​ ನಿರ್ದೇಶನದ ಶಿವರಾಜಕುಮಾರ್​, ರುಕ್ಮಿಣಿ ವಸಂತ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಭೈರತಿ ರಣಗಲ್​' ಚಿತ್ರದಲ್ಲೂ ಪ್ರತಾಪ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸಿನಿಮಾ ಇದೇ ನ. 15ರಂದು ತೆರೆಗೆ ಬರಲಿದೆ. ಪ್ರತಾಪ್​ ಈ ಚಿತ್ರದಲ್ಲಿ ವಿಲನ್​ ಶೇಡ್​ ಇರುವ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, "ನನಗೆ ಸಣ್ಣ ವಯಸ್ಸಿನಿಂದಲೂ ಪೊಲೀಸ್​ ಆಗುವ ಆಸೆಯಿತ್ತು. ನಿಜ ಜೀವನದಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ, ಆ ಆಸೆಯನ್ನು ಸಿನಿಮಾದಲ್ಲಿ ನೆರವೇರಿಸಿಕೊಂಡಿದ್ದೇನೆ. ಪಾತ್ರ ತುಂಬ ಚೆನ್ನಾಗಿದೆ. ವಿಭಿನ್ನ ಅವತಾರದಲ್ಲಿ ನನ್ನನ್ನು ನೋಡಬಹುದು. ಶಿವಣ್ಣನಿಗೆ ಟಕ್ಕರ್​ ಕೊಡುವ ಅಹಂಕಾರಿಯ ಪಾತ್ರ' ಎಂದು ಹೇಳಿಕೊಳ್ಳುತ್ತಾರೆ ಪ್ರತಾಪ್​.

ಬೂಸ್ಟ್​ ಕೊಟ್ಟ ಶಿವಣ್ಣ!
ಶಿವಣ್ಣಗೆ ವಾರ್ನಿಂಗ್​ ನೀಡುವ ಸೀನ್​ ಒಂದರ ಬಗ್ಗೆ ಪ್ರತಾಪ್​, "ಶಿವಣ್ಣ ಅವರಂತಹ ಸರಳ, ಅದ್ಭುತ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಹೇಗಪ್ಪಾ ಅವರ ಮುಂದೆ ಅಹಂಕಾರದಿಂದ ವರ್ತಿಸುವುದು? ಆ ಸೀನ್​ ಹೇಗೆ ಮಾಡಲಿ? ಅನ್ನೋ ಭಯವಿತ್ತು. ನಿರ್ದೇಶಕ ನರ್ತನ್​ ಬಳಿ ಹೋಗಿ ಕೇಳಲಾ ಅಂತಲೂ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಖುದ್ದು ಶಿವಣ್ಣ ನನ್ನ ಬಳಿ ಬಂದು, ಪ್ರತಾಪ್​ ಡೈಲಾಗ್​ ಪ್ರಾರಂಭದಲ್ಲೇ ಏಯ್​ ಎಂದು ಆವಾಜ್​ ಹಾಕುತ್ತಾ ತಗೊಳಿ. ನಾನು ನಿಮ್ಮ ಸ್ಟೇಷನ್​ಗೆ ಬಂದಿದ್ದೇನೆ. ನೀವು ನನ್ನನ್ನು ಕ್ರಿಮಿನಲ್​ನಂತೆ ನೋಡಬೇಕು ಅಂತ ಬೂಸ್ಟ್​ ಮಾಡಿದರು. ಅವರು ಹೇಳಿದಂತೆಯೇ ಮಾಡಿದೆ. ಆ ಸೀನ್​ ನೋಡುವಾಗ ಪ್ರೇಕ್ಷಕರು ಪಕ್ಕಾ ಪಕ್ಕಾ ವಿಜಲ್​ ಹಾಕುತ್ತಾರೆ' ಎಂದು ಅನುಭವ ಹಂಚಿಕೊಳ್ಳುತ್ತಾರೆ. ಹಾಗೇ "ನಿರ್ದೇಶಕ ನರ್ತನ್​ ಒಬ್ಬ ಪೆರ್ಕ್ಷನಿಸ್ಟ್​' ಎನ್ನುವ ಪ್ರತಾಪ್​, "ಒಂದು ಸೀನ್​ ಈ ರೀತಿ ಬರಬೇಕು ಅಂತ ಅವರು ಒಮ್ಮೆ ಅಂದುಕೊಂಡರೆ, ಅದು ಹಾಗೆಯೇ ಬರಬೇಕು. ಅಲ್ಲಿಯವರೆಗೂ ಪ್ರಯತ್ನ ಬಿಡುತ್ತಿರಲಿಲ್ಲ' ಎನ್ನುತ್ತಾರೆ.

ನಾನೇ ಹೀರೋ, ನಾನೇ ವಿಲನ್​
ಹೀಗೆ ಕೆಲ ಚಿತ್ರಗಳಲ್ಲಿ ವಿಲನ್​ ಪಾತ್ರದಲ್ಲಿ ನಟಿಸುತ್ತಿರುವ ಪ್ರತಾಪ್​, ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿರುವ ಬೆಂಗಳೂರು ಅಂಡರ್​ವರ್ಲ್ಡ್​ ಕುರಿತ ನೈಜ ಟನೆಯಾಧಾರಿತ "ಬಲರಾಮನ ದಿನಗಳು' ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಬಿ.ಕೆ. ಶಿವರಾಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಅಭಿಮನ್ಯು ಕಾಶೀನಾಥ್​ ನಾಯಕನಾಗಿರುವ "ಸೂರಿ ಲವ್ಸ್​ ಸಂಧ್ಯಾ' ಚಿತ್ರದಲ್ಲಿ ವಿಲನ್​ ಪಾತ್ರದಲ್ಲಿ ನಟಿಸುತ್ತಿದ್ದು, ""ಹೊಯ್ಸಳ' ಚಿತ್ರದ ವಿಲನ್​ ನಾನಾ ಪಾತ್ರಕ್ಕಿಂತಲೂ ಹತ್ತು ಪಟ್ಟು ಸೊಕ್ಕಿನ ಪಾತ್ರವಿದು. ತುಂಬ ಡ್ರಾಮಾ ಇದೆ. ಮುಂದೇನು ಅನ್ನೋ ಕುತೂಹಲ ಹುಟ್ಟಿಸುತ್ತಾ ಸಾಗುವ ಚಿತ್ರ' ಎನ್ನುತ್ತಾರೆ. ಹಾಗೇ ಅವರು ನಾಯಕನಾಗಿರುವ "ತ್ರಿವೇದಂ' ಎಂಬ ಸಿನಿಮಾ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net