

ರಿಷಿ ಕಪೂರ್ ನಿಧನರಾಗುವುದಕ್ಕೆ ಮುನ್ನ ‘ಶರ್ಮಾಜಿ ನಮ್ಕೀನ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಈ ಚಿತ್ರದ ಒಂದು ಹಂತದ ಚಿತ್ರೀಕರಣ ಮುಗಿದಿತ್ತು. ಇನ್ನೇನು ಎರಡನೇ ಹಂತದ ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲೇ ರಿಷಿ ಕಪೂರ್ ನಿಧನರಾದರು. ಅವರೇ ಇಲ್ಲದಿರುವುದರಿಂದ, ಚಿತ್ರ ಸಹ ಇನ್ನು ಮುಂದುವರೆಯುವುದಿಲ್ಲ ಎಂಬ ನಂಬಿಕೆ ಎಲ್ಲರಿಗೂ ಇತ್ತು. ಆದರೆ, ಆಶ್ಚರ್ಯದ ವಿಷಯವೆಂದರೆ, ಚಿತ್ರತಂಡದವರು ಚಿತ್ರವನ್ನು ಮುಂದುವರೆಸಿದ್ದಾರೆ. ರಿಷಿ ಕಪೂರ್ ಅರ್ಧಕ್ಕೇ ಬಿಟ್ಟಿದ್ದ ಪಾತ್ರವನ್ನು ಪರೇಶ್ ರಾವಲ್ರಿಂದ ಮಾಡಿಸಿದ್ದಾರೆ. ಈಗ ಚಿತ್ರ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ.
ಸೆಪ್ಟೆಂಬರ್ 04, ರಿಷಿ ಕಪೂರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರದಲ್ಲಿನ ರಿಷಿ ಕಪೂರ್ ಅವರ ಪೋಸ್ಟರ್ ಬಿಡುಗಡೆ ಅವರನ್ನು ನೆನಪಿಸಿಕೊಂಡಿರುವ ಚಿತ್ರತಂಡದವರು, ಅದರ ಜತೆಗೆ ಪರೇಶ್ ರಾವಲ್ ಅವರ ಪೋಸ್ಟರ್ ಸಹ ಬಿಡುಗಡೆ ಮಾಡುವ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ರಿಷಿ ಕಪೂರ್ ಅರ್ಧಕ್ಕೇ ಬಿಟ್ಟಿದ್ದ ಪಾತ್ರವನ್ನು ಮುಂದುವರೆಸುವ ನಿರ್ಧಾರ ತೆಗೆದುಕೊಂಡ ಪರೇಶ್ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಧನ್ಯವಾದ ಸಲ್ಲಿಸಿದ್ದಾರೆ. ಹಿತೇಶ್ ಭಾಟಿಯಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಜೂಹಿ ಚಾವ್ಲಾ, ಸತೀಶ್ ಕೌಶಿಕ್ ಮುಂತಾದವರು ನಟಿಸಿದ್ದಾರೆ.