ವಿಷ್ಣು ವಿಜಯ್​, ಅಪ್ಪಾಜಿ, ವಿಷ್ಣು ಸೇನಾ ಸಿನಿಮಾದಲ್ಲಿ ಮಿಂಚಿದ್ದ ನಟ ಪಂಕಜ್​ ಧೀರ್ ಇನ್ನಿಲ್ಲ!​ Pankaj Dheer

Pankaj Dheer
Published on

ಮುಂಬೈ: ಕರ್ನಾಟಕ ರತ್ನ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್​ ಡಾ. ವಿಷ್ಣುವರ್ಧನ್​ ಅಭಿನಯದ ವಿಷ್ಣು ವಿಜಯ್​, ಅಪ್ಪಾಜಿ ಹಾಗೂ ವಿಷ್ಣು ಸೇನಾ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದ ಬಾಲಿವುಡ್​ ನಟ ಪಂಕಜ್​ ಧೀರ್ (Pankaj Dheer)​ ಅವರು ಇಂದು (ಅ.15) ಕೊನೆಯುಸಿರೆಳೆದಿದ್ದಾರೆ.

ಪಂಕಜ್​ ಅವರು ಕೆಲ ಸಮಯದ ಹಿಂದೆ ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದರು. ಅದರ ವಿರುದ್ಧ ಹೋರಾಡಿ ಚೇತರಿಸಿಕೊಂಡಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಆ ಕಾಯಿಲೆ ಮತ್ತೆ ಕಾಣಸಿಕೊಂಡಿತು. ಇದರಿಂದಾಗಿ ಪಂಕಜ್​ ಅವರು ತೀವ್ರ ಅಸ್ವಸ್ಥಗೊಂಡಿದ್ದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಸುದ್ದಿಯನ್ನು ಪಂಕಜ್​ ಅವರ ಸ್ನೇಹಿತ, ಸಹೋದ್ಯೊಗಿ ಮತ್ತು ಸಿಐಎನ್​ಟಿಎಎ ( ಸಿನಿ ಮತ್ತು ಟಿವಿ ಕಲಾವಿದರ ಸಂಘ ) ಸದಸ್ಯ ಅಮಿತ್​ ಬೇಹಿ ಅವರು ಖಚಿತಪಡಿಸಿದ್ದಾರೆ.

ಪಂಕಜ್​ ಅವರು ಬಿ.ಆರ್​. ಚೋಪ್ರಾ ನಿರ್ದೇಶನದ ಮಹಾಭಾರತದ ಟಿವಿ ಸರಣಿಯಲ್ಲಿ ಕರ್ಣನ ಪಾತ್ರದಲ್ಲಿ ಮಿಂಚಿದ್ದರು. ಸಾವಿನ ಬೆನ್ನಲ್ಲೇ ಸಿನಿ ಮತ್ತು ಟಿವಿ ಕಲಾವಿದರ ಸಂಘ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನಮ್ಮ ಟ್ರಸ್ಟ್‌ನ ಹಿಂದಿನ ಅಧ್ಯಕ್ಷರು ಮತ್ತು CINTAA ದ ಮಾಜಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ಜಿ ಅವರು ಅಕ್ಟೋಬರ್ 15, 2025 ರಂದು ನಿಧನರಾದರು. ಈ ಸುದ್ದಿಯನ್ನು ನಾವು ತೀವ್ರ ದುಃಖದಿಂದ ನಿಮಗೆ ತಿಳಿಸುತ್ತೇವೆ. ಇಂದು ಸಂಜೆ 4.30 ಕ್ಕೆ ಮುಂಬೈನ ವಿಲೇ ಪಾರ್ಲೆ (ಪಶ್ಚಿಮ) ದಲ್ಲಿರುವ ಪವನ್ ಹನ್ಸ್ ಪಕ್ಕದಲ್ಲಿ ಅವರ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಂಕಜ್​ ಅವರು 'ಸನಮ್ ಬೇವಫಾ', 'ಬಾದ್‌ಶಾ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹಾಗೂ 'ಚಂದ್ರಕಾಂತ' ಮತ್ತು 'ಸಸುರಲ್ ಸಿಮರ್ ಕಾ' ನಂತಹ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಪಂಕಜ್​ ಅವರು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರು 'ಮೈ ಫಾದರ್ ಗಾಡ್‌ಫಾದರ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ ಅಲ್ಲದೆ, ಅಭಿನಯ್ ಆಕ್ಟಿಂಗ್ ಅಕಾಡೆಮಿಯನ್ನು ಕೂಡ ಸ್ಥಾಪಿಸಿದ್ದಾರೆ.

ಕನ್ನಡಿಗರಿಗೂ ಪರಿಚಿತ

ಪಂಕಜ್​ ಧೀರ್​ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್​ ಸಿನಿಮಾಗಳಲ್ಲಿ ಮಾತ್ರ ಪಂಕಜ್​ ಅವರು ನಟಿಸಿದ್ದಾರೆ. ವಿಷ್ಣು ವಿಜಯ್​ ಸಿನಿಮಾದಲ್ಲಿ ವಿಷ್ಣುವರ್ಧನ್​ ಜತೆ ಅಕ್ಷಯ್​ ಕುಮಾರ್​ ಹಾಗೂ ಪಂಕಜ್​ ಧೀರ್​ ಅವರು ನಟಿಸಿದರು. ಅಲ್ಲದೆ, ಅಪ್ಪಾಜಿ ಹಾಗೂ ವಿಷ್ಣು ಸೇನಾ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮ್ಮ ಖಡಕ್​ ನಟನೆಯ ಮೂಲಕವೇ ಪಂಕಜ್​ ಅವರು ಗುರುತಿಸಿಕೊಂಡಿದ್ದರು.

ಈ ಹಿಂದೆ ಇಂಡಿಯಾ ಫೋರಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪಂಕಜ್​ ಧೀರ್, ಪ್ರೇಕ್ಷಕರಲ್ಲಿ ತನ್ನ ಪಾತ್ರ ಕರ್ಣನ ಜನಪ್ರಿಯತೆಯನ್ನು ನೆನಪಿಸಿಕೊಂಡಿದ್ದರು. ಕರ್ಣನ ಪಾತ್ರ ಎಷ್ಟರ ಮಟ್ಟಿಗೆ ಹೆಸರು ಮಾಡಿತು ಅಂದರೆ, ತನ್ನ ಹೆಸರಿನಲ್ಲಿ ಪ್ರತಿಮೆಗಳನ್ನು ಮತ್ತು ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ಅಲ್ಲದೆ, ಜನರು ನನ್ನನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಮತ್ತು ಆರಾಧಿಸುತ್ತಿದ್ದಾರೆ. ಶಾಲೆಗಳ ಇತಿಹಾಸ ಪುಸ್ತಕಗಳಲ್ಲಿಯೂ ಸಹ, ಕರ್ಣನ ಉಲ್ಲೇಖವಿದ್ದರೆ ಅಲ್ಲಿ ನನ್ನ ಚಿತ್ರವನ್ನೇ ಬಳಸುತ್ತಾರೆ ಎಂದಿದ್ದರು.

ನನ್ನ ಪ್ರತಿಮೆ ಬಳಿ ಪ್ರತಿದಿನ ಪೂಜೆ ನಡೆಯುವ ಎರಡು ದೇವಾಲಯಗಳಿವೆ. ಕರ್ಣ ಮಂದಿರದಲ್ಲಿ ನನಗೆ ಪೂಜೆ ನಡೆಯುತ್ತದೆ. ನಾನು ಆ ದೇವಾಲಯಗಳಿಗೆ ಹೋಗಿದ್ದೇನೆ. ಒಂದು ಕರ್ನಾಲ್‌ನಲ್ಲಿ ಮತ್ತು ಇನ್ನೊಂದು ಬಸ್ತಾರ್‌ನಲ್ಲಿದೆ. ನನ್ನ ಎಂಟು ಅಡಿ ಎತ್ತರದ ಪ್ರತಿಮೆ ಇದೆ ಮತ್ತು ಜನರು ಅಲ್ಲಿಗೆ ಬಂದು ಪೂಜಿಸುತ್ತಾರೆ. ನಾನು ಅಲ್ಲಿಗೆ ಹೋದಾಗ, ಜನರು ನನ್ನನ್ನು ಹೃದಯದ ಕೆಳಗಿನಿಂದ ಪ್ರೀತಿಸುತ್ತಾರೆ. ನನ್ನನ್ನು ಕರ್ಣ ಅಂತ ಒಪ್ಪಿಕೊಂಡಿರುವುದನ್ನು ಇದು ತೋರಿಸುತ್ತದೆ ಎಂದು ಪಂಕಜ್​ ಅವರು ಹೇಳಿಕೆ ನೀಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net