

ಬೆಂಗಳೂರು: ಕನ್ನಡದ ನಟಿಯರು ತೆಲುಗಿನಲ್ಲಿ ನೆಲೆಯೂರುತ್ತಿರುವುದು ಹೊಸ ಟ್ರೆಂಡ್ ಆಗಿಬಿಟ್ಟಿದೆ. ಈಗಾಗಲೇ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ನಟಿಸುತ್ತಿದ್ದಾರೆ. ಈಗ ನಭಾ ನಟೇಶ್ ಸಹ ತೆಲುಗಿನಲ್ಲಿ ಸಖತ್ ಬಿಜಿಯಾಗುತ್ತಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಮೂಲಕ ಟಾಲಿವುಡ್ನಲ್ಲಿ ಸಖತ್ ಹವಾ ಸೃಷ್ಟಿಸಿರುವ ನಭಾ, ಸದ್ಯ ಸಾಯಿ ಧರ್ಮ ತೇಜ ಜತೆಗೆ ‘ಸೋಲೋ ಬ್ರತುಕುಡೇ ಸೋ ಬೆಟರ್’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ‘ಅಲ್ಲುಡು ಅಧುರ್ಸ್’ನಲ್ಲಿಯೂ ನಟಿಸುತ್ತಿದ್ದಾರೆ.
ಈಗ ಅವರು ‘ಅಂಧಾದುನ್’ನ ತೆಲುಗು ರೀಮೇಕ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಯುಷ್ಮಾನ್ ಖುರಾನಾ ಅಭಿನಯದ ‘ಅಂಧಾದುನ್’ ಚಿತ್ರವು 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ ಸೇರಿದಂತೆ ಒಟ್ಟು ಮೂರು ಪ್ರಶಸ್ತಿಗಳನ್ನು ಈ ಸಸ್ಪೆನ್ಸ್ ಥ್ರಿಲ್ಲರ್ ತನ್ನದಾಗಿಸಿಕೊಂಡಿತ್ತು. ಇಷ್ಟೆಲ್ಲ ಮನ್ನಣೆ ಗಿಟ್ಟಿಸಿಕೊಂಡ ಈ ಸಿನಿಮಾ ತೆಲುಗಿನಲ್ಲಿಯೂ ರಿಮೇಕ್ ಆಗುತ್ತಿದೆ.
ತೆಲುಗು ರಿಮೇಕ್ನಲ್ಲಿ ನಿತಿನ್ ನಾಯಕನಾಗಿ ನಟಿಸುತ್ತಿರುವುದು ಈ ಹಿಂದೆಯೇ ಅಂತಿಮವಾಗಿದೆ. ಆದರೆ, ನಾಯಕಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದರೂ, ಯಾವುದೂ ಅಂತಿಮವಾಗಿರಲಿಲ್ಲ. ನಯನತಾರಾ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತಾದರೂ, ಇದೀಗ ಆ ಅವಕಾಶ ಕನ್ನಡತಿ ನಭಾ ನಟೇಶ್ ಪಾಲಿಗೆ ಒಲಿದಿದೆ.
ಮೂಲ ಸಿನಿಮಾದಲ್ಲಿ ರಾಧಿಕಾ ಆಪ್ಟೆ ನಿಭಾಯಿಸಿದ್ದ, ಪಾತ್ರವನ್ನು ತೆಲುಗಿನಲ್ಲಿ ನಭಾ ನಿಭಾಯಿಸಲಿದ್ದಾರೆ. ಮೆರ್ಲಪಕಾ ಗಾಂಧಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಎನ್ ಸುಧಾಕರ್ ರೆಡ್ಡಿ ಮತ್ತು ನಿಹಾರಿಕಾ ರೆಡ್ಡಿ ನಿರ್ವಿುಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರ ಇನ್ನೆರಡು ತಿಂಗಳ ಬಳಿಕ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಸದ್ಯ ತಾರಾಗಣದ ಆಯ್ಕೆ, ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.