ಪತ್ನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗ್ಗೇಶ್​ಗೆ ಇಂದು 38ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ!

Published on
ಕನ್ನಡದ ಖ್ಯಾತ ನಟ ಜಗ್ಗೇಶ್ ಅವರು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಹೌದು, ಅವರು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ತಮ್ಮ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತೆ ಇದೆ. ಇನ್ನು, ಪತ್ನಿ ಪರಿಮಳಾ ಜೊತೆಗಿನ ನಟನ ಲವ್​ಸ್ಟೋರಿ ಅಂತೂ ಸಖತ್ ಸಿನಿಮೀಯ ಎಂದೇ ಹೇಳಬಹುದು. ಅಂದಹಾಗೆ, ಇಂದು ಜಗ್ಗೇಶ್-ಪರಿಮಳಾ ಅವರ ದಾಂಪತ್ಯ ಜೀವನಕ್ಕೆ 38ರ ವಸಂತವಂತೆ. ಹೀಗಾಗಿ, ಬರೋಬ್ಬರಿ 38 ವರ್ಷ ಒಟ್ಟಿಗೆ ಇದ್ದ ಈ ಜೋಡಿಗೆ ಎಲ್ಲರಿಂದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಹರಿದು ಬಂದವು. ನಟ ಜಗ್ಗೇಶ್ ಮತ್ತು ಪರಿಮಳಾ ಅವರದ್ದು ಲವ್ ಮ್ಯಾರೇಜ್ ಆಗಿದ್ದು. ಇವರಿಬ್ಬರೂ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯಲ್ಲಿ ಬಿದ್ದರಂತೆ.
ಜಗ್ಗೇಶ್ ಪತ್ನಿ ಪರಿಮಳಾ ಅವರಿಗೆ ಆಗ ಕೇವಲ 14 ವರ್ಷ ವಯಸ್ಸು. ಜಗ್ಗೇಶ್​ ಅವರಿಗೆ 19 ರ ಪ್ರಾಯವಂತೆ. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984 ರ ಮಾ.22 ರಂದು ಜಗ್ಗೇಶ್ ಹಾಗೂ ಪರಿಮಳಾ ರಿಜಿಸ್ಟರ್ ಮ್ಯಾರೇಜ್ ಆದರು. ಆದರೆ, ಇದಕ್ಕೆ ಪರಿಮಳಾ ಅವರ ಕುಟುಂಬದವರಿಂದಲೇ ಅಡ್ಡಿ ಎದುರಾಗಿದ್ದು, ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಹೌದು, ಈ ವಿಚಾರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಜಗ್ಗೇಶ್​ಗೆ ಮದುವೆಯಾದ 3ನೇ ದಿನವೇ ಪರಿಮಳಾ ಅವರ ತಂದೆ, ಪರಿಮಳಾರನ್ನು ಅವರ ಮನೆಗೆ ಕರೆದುಕೊಂಡು ಹೋದರಂತೆ. ನಂತರ ಒಂದೂವರೆ ವರ್ಷ ಜಗ್ಗೇಶ್ ಹಾಗೂ ಪರಿಮಳಾ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ. ಬಳಿಕ ಬೆಂಗಳೂರಿನಿಂದ ಮದ್ರಾಸ್​ಗೆ ತೆರಳಿದ ಜಗ್ಗೇಶ್ ಅವರ ಮಡದಿಯನ್ನು ಬೆಂಗಳೂರಿನಲ್ಲಿನ ಅವರ ಮನೆಗೆ ಕರೆತಂದರು.
ಜಗ್ಗೇಶ್ ಅವರು ಹೀಗೆ ಮಾಡಿದ ಬಳಿಕ ‘ಚಿತ್ರನಟನಿಂದ ಹುಡುಗಿಯ ಕಿಡ್ನಾಪ್’ ಎಂಬ ಸುದ್ದಿಗಳು ಪ್ರಕಟವಾದವು. ಇನ್ನು, ಈ ಅಪಹರಣದ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೂ, ಸುಪ್ರೀಂ ಕೋರ್ಟ್ ನಲ್ಲಿ ಜಗ್ಗೇಶ್​-ಪರಿಮಳಾ ಪ್ರೀತಿಗೆ ಜಯ ಸಿಕ್ಕಿತು. ನಟ ಜಗ್ಗೇಶ್ ಅವರು, ''ಇಂದು ಪರಿಮಳನಿಗೆ ತಾಳಿ ಕಟ್ಟಿ 38ನೆ ವರ್ಷ. ಪರಿಮಳಚಾರ್ಯರು, ‘ಗುರುರಾಜ’, ‘ಯತಿರಾಜ’ ರಾಯರ ಸಂಬಂಧಿತ ನಾಮಾಂಕಿತ. ‘ಅರ್ಜುನ’ ಕೃಷ್ಣನ ಪ್ರಿಯ ಸಖ. ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರನ್ನು ದಿನವೂ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೊಮ್ಮಗ. ಶುಭ ಮಂಗಳವಾರ'', ಎಂದು ಟ್ವೀಟ್ ಮಾಡಿ ಒಂದು ವಿಡಿಯೋ ಜತೆಗೆ ಸಂತಸ ಶೇರ್ ಮಾಡಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net