ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!

Dattanna
Published on

ಬೆಂಗಳೂರು: ಎಚ್​​.ಜಿ. ದತ್ತಾತ್ರೇಯ ಎಂದು ಪೂರ್ತಿ ಹೆಸರನ್ನು ಹೇಳಬೇಕಂತೇನೂ ಇಲ್ಲ, ದತ್ತಣ್ಣ ಎಂದರೂ ಸಾಕು.. ಜನರಿಗೆ ಅದರಲ್ಲೂ ಸಿನಿಪ್ರಿಯರಿಗೆ ತಕ್ಷಣ ನೆನಪಿಗೆ ಬರುವುದೇ ಇವರು. ಹೌದು.. ನಾಳೆ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದತ್ತಣ್ಣ ಅವರ ಜನ್ಮದಿನ. ವಿಶೇಷವೆಂದರೆ ನಾಳೆಗೆ ಇವರಿಗೆ 80 ವರ್ಷ (20-4-1942)ಪೂರ್ಣಗೊಳ್ಳಲಿದೆ.
ಬಹುಮುಖ ಪ್ರತಿಭೆಯಾಗಿರುವ ದತ್ತಣ್ಣ, ಇಂಜಿನಿಯರಿಂಗ್ ಪದವೀಧರರಾಗಿ ಬಳಿಕ ಹಿಂದುಸ್ತಾನ್​ ಏರೋನಾಟಿಕ್ಸ್ ಲಿಮಿಟೆಡ್​, ಭಾರತೀಯ ವಾಯುಸೇನೆಗಳಲ್ಲಿ ಉದ್ಯೋಗಿಯಾಗಿದ್ದು, ನಂತರ ರಂಗಭೂಮಿಗಳಲ್ಲೂ ಕಾಣಿಸಿಕೊಂಡು ಸಿನಿಮಾದಲ್ಲೂ ಅಭಿನಯಿಸಿ, ಬಹಳಷ್ಟು ಜನಪ್ರಿಯತೆ ಹಾಗೂ ಅಭಿಮಾನ ಗಳಿಸಿದ್ದಾರೆ.

ಅಷ್ಟಕ್ಕೂ ದತ್ತಣ್ಣ ಅವರಿಗೆ ಒಂದಲ್ಲ ಮೂರು ಬರ್ತ್​ಡೇ. ಹಾಗಂತ ಅವರೇ ತಮ್ಮ ಸ್ನೇಹಿತರ ವಲಯದಲ್ಲಿ ಹೇಳಿಕೊಂಡಿದ್ದಾರೆ. ನನಗೆ ಮೂರು ಜನ್ಮದಿನಗಳಿವೆ. ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಅಧಿಕೃತ ಎನ್ನಲಾಗುವ ಎಸ್​ಎಸ್​ಎಲ್​ಸಿ ಅಂಕಪಟ್ಟಿ ಪ್ರಕಾರ ಏ. 8ರಂದು ನನ್ನ ಜನ್ಮದಿನ, ಅದು ಈಗಾಗಲೇ ಆಗಿಹೋಗಿದೆ. ಇನ್ನು ಜಾತಕದ ಪ್ರಕಾರ ನನ್ನ ನಿಜವಾದ ಬರ್ತ್​ಡೇ ಏ. 20ರಂದು. ಆದರೆ ಹಿಂದು ಕ್ಯಾಲೆಂಡರ್ ಪ್ರಕಾರ ಶಂಕರ ಜಯಂತಿಯಂದು ನನ್ಮ ಜನ್ಮದಿನ, ಅದು ಯಾವಾಗ ಬರುತ್ತದೆ ಅಂತಲೇ ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ ದತ್ತಣ್ಣ.

ಇನ್ನು ಸ್ನೇಹಿತರು ಯಾರಾದರೂ ಜನ್ಮದಿನದ ನೆಪದಲ್ಲಿ ಸಿಗಲು, ಸಂತೋಷ ಹಂಚಿಕೊಳ್ಳಲು ಅಥವಾ ಶುಭಾಶಯ ಕೋರುವ ಸಲುವಾಗಿ ಮುಂಚಿತವಾಗಿ ಮಾತಿಗೆಳೆದರೆ ಇವರು, ನಮ್ಮ ಮನೆಯಲ್ಲಿ ದೊಡ್ಡವರದ್ದೆಲ್ಲ ಜನ್ಮದಿನ ಆಚರಿಸುವುದೇ ಇಲ್ಲ, ಅವೇನಿದ್ದರೂ ಚಿಕ್ಕಮಕ್ಕಳಿಗಷ್ಟೇ ಎನ್ನುತ್ತಾರಂತೆ. ಸಾಮಾನ್ಯವಾಗಿ ನನ್ನ ಜನ್ಮದಿನ ಗೊತ್ತಿಲ್ಲದಂತೆಯೇ ಕಳೆದುಹೋಗಿರುತ್ತದೆ, 80ನೇ ಜನ್ಮದಿನ ಕೂಡ ಹಾಗೆಯೇ ಎನ್ನುವ ದತ್ತಣ್ಣ, ಸ್ನೇಹಿತರೊಂದಿಗೆ ಸಿಗಲು ಬೆರೆಯಲು ವಿಶೇಷ ದಿನವೇ ಬೇಕಾಗಿಲ್ಲ ಎಂದೂ ಹೇಳುತ್ತಾರೆ ಎಂಬುದಾಗಿ ಅವರ ಮಿತ್ರ ಎಚ್​ಎಎಲ್​ನ ನಿವೃತ್ತ ಉದ್ಯೋಗಿ ಎಚ್.​ವಿ. ಕೃಷ್ಣಮೂರ್ತಿ ಭಟ್ಟ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net