

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ನಟ ಧರ್ಮ ಕೀರ್ತಿರಾಜ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಅವರು ಟಾಲಿವುಡ್ನಲ್ಲೇ ಸೆಟಲ್ ಆಗುತ್ತಾರಂತೆ ಅಂತೆಲ್ಲ ಅಂತೆಕಂತೆಗಳು ಸ್ಯಾಂಡಲ್ವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ ಧರ್ಮ, ಆ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. "ಸಂಭಾವನೆ ಹೆಚ್ಚಿಸಿಕೊಂಡಿದ್ದೇನೆ ಅಂತೆಲ್ಲ ಹೇಳುತ್ತಿದ್ದಾರೆ. ಆ ರೀತಿ ಏನೂ ಇಲ್ಲ. ಸಂಭಾವನೆಯಲ್ಲಿ ಯಾವುದೇ ಬದಲಾವಣೆ ಇಲ್ಲ' ಎನ್ನುತ್ತಾರೆ.
ಹಾಗೇ ತೆಲುಗು ಡೆಬ್ಯೂ ಬಗ್ಗೆ, "ನನ್ನ ಹಿಂದಿನ ಸಿನಿಮಾಗಳನ್ನು ನೋಡಿ, ನಿರ್ದೇಶಕ ಎಂಜಿಆರ್ ಮತ್ತು ನಿರ್ಮಾಪಕ ಹರೀಶ್ ತೆಲುಗು ಸಿನಿಮಾ ಮಾಡುವ ಬಗ್ಗೆ ಹೇಳಿದರು. ಕನ್ನಡದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿರುವ ನಾನು ಇದೀಗ "ಬ್ಲಡ್ ರೋಸಸ್' ಮೂಲಕ ಹೊಸ ಪಾತ್ರ, ಲುಕ್ನಲ್ಲಿ ತೆಲುಗಿಗೆ ಡೆಬ್ಯೂ ಮಾಡುತ್ತಿದ್ದೇನೆ. ರಾಮಗೋಪಾಲ್ ವರ್ಮಾ ಗರಡಿಯಲ್ಲಿ ನಟಿಸಿರುವ ಅಪ್ಸರಾ ರಾಣಿ ಚಿತ್ರದ ನಾಯಕಿ. ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಎರಡು ಶೇಡ್ಗಳಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ. ವಿಶೇಷ ಅಂದರೆ, ರಂಜಿತ್ ರಾಮ್ ಹೆಸರಿನಲ್ಲಿ ಧರ್ಮ ತೆಲುಗಿಗೆ ಪರಿಚಯವಾಗುತ್ತಿದ್ದಾರೆ.
ಟಾಲಿವುಡ್ ಪದಾರ್ಪಣೆಗೆ ಶಿವಣ್ಣ ಸ್ಫೂರ್ತಿ ಎನ್ನುವ ಧರ್ಮ, ""ಜೈಲರ್'ನಲ್ಲಿ ನಟಿಸಿದ್ದ ಶಿವಣ್ಣನನ್ನು ಎಲ್ಲ ಭಾಷೆಗಳ ಜನರೂ ಅಪ್ಪಿಕೊಂಡರು. ರಜಿನಿಕಾಂತ್ ಅವರಿಗೆ ಸಿಕ್ಕಷ್ಟೇ ಶಿಳ್ಳೆ, ಚಪ್ಪಾಳೆ ಶಿವಣ್ಣ ಎಂಟ್ರಿಗೂ ದೊರೆಯಿತು. ಇದೀಗ ಅವರು ರಾಮಚರಣ್ ಜತೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯದಲ್ಲಿ ನನಗೆ ಶಿವಣ್ಣನೇ ದೊಡ್ಡ ಸ್ಫೂರ್ತಿ' ಎನ್ನುತ್ತಾರೆ.
ಕಳೆದ 15 ವರ್ಷಗಳಿಂದ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಧರ್ಮ, ಒಂದು ಉತ್ತಮ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. "ಇಷ್ಟು ಅವಕಾಶಗಳು ಸಿಗಲು ಕಾರಣ ನನ್ನ ವೃತ್ತಿ ಧರ್ಮ. ಎಲ್ಲೂ, ಯಾರ ಮೇಲೂ ಒತ್ತಡ ಹೇರದೇ, ತಂದೆಯ ಹೆಸರು ಹೇಳಿಕೊಂಡು ಅವಕಾಶ ಕೇಳದೇ, ಮತ್ತೊಬ್ಬರ ದಾರಿ ತಪ್ಪಿಸುವ ಕೆಲಸ ಮಾಡದೇ, ಚಿತ್ರತಂಡ ಹೇಳಿದಂತೆ ಕೆಲಸ ಮಾಡುತ್ತೇನೆ. ಕೆಲ ಸಿನಿಮಾಗಳು ಫ್ಲಾಪ್ ಆದವು ಅಂತ ಚಿತ್ರರಂಗ ತೊರೆದು ಬೇರೇನೋ ಮಾಡಲು ಹೋಗಲಿಲ್ಲ. ನಿರ್ದೇಶಕರು, ನಿರ್ಮಾಪಕರೇ ಧೈರ್ಯ ಹೇಳಿ, ನನ್ನನ್ನು ನಂಬಿ ಸಿನಿಮಾ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ನಾನು ಇಷ್ಟು ವರ್ಷಗಳಾದರೂ ಇಲ್ಲಿದ್ದೇನೆ. ಕೆಲವೊಮ್ಮೆ ಸಿನಿಮಾ ಚೆನ್ನಾಗಿದ್ದರೂ ಪ್ರಚಾರ ಸಿಗದೇ ಜನರನ್ನು ತಲುಪಲು ಸಾಧ್ಯವಾಗಿಲ್ಲ ಎಂಬ ಬೇಸರವೂ ಇದೆ' ಎನ್ನುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅವರು ಕಥೆಗಳ ಆಯ್ಕೆಯಲ್ಲಿ ಹೆಚ್ಚು ಜಾಗೃತಿ ವಹಿಸುತ್ತಿದ್ದಾರಂತೆ. "ಈಗ ಪ್ರೇಕ್ಷಕರು ತುಂಬ ಬುದ್ಧಿವಂತರಾಗಿದ್ದಾರೆ. ಕಥೆ ಮತ್ತು ಮೇಕಿಂಗ್ ಚೆನ್ನಾಗಿದ್ದರೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಕಥೆಯಿಂದ ಹಿಡಿದು ಪ್ರಿ-ಪ್ರೊಡಕ್ಷನ್, ಶೂಟಿಂಗ್, ಪೋಸ್ಟ್-ಪ್ರೊಡಕ್ಷನ್ ಹೀಗೆ ಚಿತ್ರದ ಪ್ರತಿಯೊಂದು ವಿಷಯದಲ್ಲೂ ನಾನು ತಂಡದ ಜತೆ ನಿಲ್ಲುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ಧರ್ಮ.
ಈ ವರ್ಷ ಧರ್ಮ ನಾಯಕನಾಗಿ ನಟಿಸಿರುವ "ತಲ್ವಾರ್' ಹಾಗೂ ಅತಿಥಿ ಪಾತ್ರದಲ್ಲಿದ್ದ "ದಾಸರಹಳ್ಳಿ' ತೆರೆಗೆ ಬಂದಿದ್ದು, ಇನ್ನೂ ಮೂರು ಚಿತ್ರಗಳು ರಿಲೀಸ್ಗೆ ರೆಡಿಯಾಗುತ್ತಿವೆ. ""ಅಮರಾವತಿ...' ಶೂಟಿಂಗ್ ಮುಗಿದಿದ್ದು, ಕ್ಲೆಮ್ಯಾಕ್ಸ್ ಫೈಟ್ ಮಾತ್ರ ಬಾಕಿಯಿದೆ. "ಬ್ಲಡ್ ರೋಸಸ್' ತೆಲುಗಿನ ಜತೆ ಕನ್ನಡದಲ್ಲೂ ರಿಲೀಸ್ ಆಗಲಿದೆ. ರಾಗಿಣಿ ಜತೆ ನಟಿಸುತ್ತಿರುವ "ಮದನಿಕ' ಕೂಡ ಈ ವರ್ಷ ಬಿಡುಗಡೆ. ಇದಲ್ಲದೇ ಕನ್ನಡದಲ್ಲಿ ಮತ್ತೊಂದು ಸಿನಿಮಾ ಇದೇ ತಿಂಗಳಂತ್ಯ ಸೆಟ್ಟೇರಲಿದ್ದು, ಇನ್ನೊಂದು ತೆಲುಗು ಚಿತ್ರದ ಮಾತುಕತೆ ನಡೆಯುತ್ತಿದೆ' ಎಂದು ಮಾಹಿತಿ ನೀಡುತ್ತಾರೆ.