

ಬೆಂಗಳೂರು: ‘ಬೈ ಟು ಲವ್’ ಚಿತ್ರದ ಚಿತ್ರೀಕರಣ ಮುಗಿದು ಕೆಲವು ತಿಂಗಳುಗಳೇ ಆಗಿವೆ. ಆದರೂ ಧನ್ವೀರ್ ಅಭಿನಯದ ಮೂರನೇ ಚಿತ್ರ ಘೋಷಣೆಯಾಗಿಲ್ಲ ಎನ್ನುತ್ತಿದ್ದವರಿಗೆ, ಕೊನೆಗೂ ಉತ್ತರ ಸಿಕ್ಕಿದೆ. ಶುಕ್ರವಾರ, ಸಂಕ್ರಾಂತಿ ಪ್ರಯುಕ್ತ ಧನ್ವೀರ್ ಅಭಿನಯದ ಮೂರನೆಯ ಚಿತ್ರದ ಘೋಷಣೆ ಆಗಿದ್ದು, ಚಿತ್ರಕ್ಕೆ ‘ವಾಮನ’ ಎಂಬ ಹೆಸರನ್ನು ಇಡಲಾಗಿದೆ. ಜತೆಗೆ ಚಿತ್ರದ ಫಸ್ಟ್ಲುಕ್ ಸಹ ಬಿಡುಗಡೆಯಾಗಿದೆ.
ಧನ್ವೀರ್ ಮೊದಲ ಚಿತ್ರ ‘ಬಜಾರ್’ ಆಕ್ಷನ್ ಚಿತ್ರವಾಗಿತ್ತು. ಆ ನಂತರ ಅವರು ದಿಕ್ಕು ಬದಲಾಯಿಸಿ, ಪ್ರೇಮಕಥೆಯತ್ತ ಹೊರಳಿದ್ದರು. ಈಗ ಮತ್ತೊಮ್ಮೆ ಆಕ್ಷನ್ ಚಿತ್ರವನ್ನು ಒಪ್ಪಿಕೊಂಡಿರುವ ಧನ್ವೀರ್, ಅದರಲ್ಲಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಕೆಟ್ಟ ಮನುಷ್ಯನಿಗೂ ಒಂದು ಗಟ್ಟಿ ಕಾರಣವಿರುತ್ತದೆ ಎಂಬ ವಿಷಯವನ್ನಿಟ್ಟುಕೊಂಡು ಕಥೆ ಮಾಡಲಾಗಿದೆ.
ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದ ಶಂಕರ್ ರಾಮನ್, ಈಗ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ವೆುಂಟ್ ಸಂಸ್ಥೆಯಡಿ ಚೇತನ್ ಗೌಡ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.