ಹೆಂಡತಿಗೆ ಹೊಡೆದ ನಟನ ಬಂಧನ; ಥಳಿಸಿದ್ದಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ಕೊಟ್ಟ ಪತ್ನಿ

Untitled-1
Published on

ಮುಂಬೈ: ಬಣ್ಣದ ಲೋಕದ ತಾರಾ ದಂಪತಿಯ ಬದುಕಿನ ಬಣ್ಣ ಬಯಲಾಗಿದ್ದು, ತೆರೆಯ ಮರೆಯಲ್ಲಿರಬೇಕಾದ ವಿಷಯ ಜಗತ್ತಿಗೇ ತೆರೆದುಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನನ್ನು ಬಂಧಿಸಿದ್ದರು.

ಹಿಂದಿ ಕಿರುತೆರೆಯ ನಟ ಕರಣ್ ಮೆಹ್ರಾ ಆರೋಪಿ. ಇವರ ಪತ್ನಿ ನಿಶಾ ರಾವಲ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಈ ನಟನನ್ನು ಬಂಧಿಸಿದ್ದರು. ಪತಿ-ಪತ್ನಿ ಇಬ್ಬರೂ ಕಿರುತೆರೆ ಕಲಾವಿದರಾಗಿದ್ದು, ಇವರಿಬ್ಬರ ನಡುವೆ ನಿನ್ನೆ ರಾತ್ರಿ ಮನೆಯಲ್ಲಿ ಜಗಳವಾಗಿದೆ. ಈ ಸಂದರ್ಭದಲ್ಲಿ ಪತ್ನಿಯನ್ನು ಪತಿ ಥಳಿಸಿದ್ದು, ಆಕೆ ಪೊಲೀಸರಿಗೆ ಕರೆ ಮಾಡಿದ್ದರು.

ಪತ್ನಿ ನೀಡಿದ್ದ ದೂರಿನ ಮೇರೆಗೆ ಮುಂಬೈನ ಗೋರೆಗಾಂವ್​ನಲ್ಲಿರುವ ಇವರ ಮನೆಗೆ ಸೋಮವಾರ ರಾತ್ರಿ 11ರ ಸುಮಾರಿಗೆ ಬಂದ ಪೊಲೀಸರು ಕರಣ್​ನನ್ನು ಬಂಧಿಸಿಕೊಂಡು ಹೋಗಿದ್ದರು. ಕರಣ್​ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಇಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. 'ಏ ರಿಷ್ತಾ ಕ್ಯಾ ಕೆಹ್​ಲಾತಾ ಹೈ' ಧಾರಾವಾಹಿ ಮೂಲಕ ಕರಣ್ ಜನಪ್ರಿಯತೆ ಪಡೆದಿದ್ದಾರೆ. ಡಾನ್ಸ್ ರಿಯಾಲಿಟಿ ಶೋ 'ನಾಚ್ ಬಲಿಯೆ' ಜತೆಗೆ ಹಲವಾರು ಧಾರಾವಾಹಿಗಳಲ್ಲಿ ಈ ದಂಪತಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net