ಚಿತ್ರೋದ್ಯಮದವರ ಬೆನ್ನಿಗೆ ನಿಂತ ನಟ ಅರ್ಜುನ್ ಗೌಡ; ಉಚಿತ ಆಂಬುಲೆನ್ಸ್ ಸೇವೆ

Gowda
Published on

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ. ಆಂಬುಲೆನ್ಸ್ ಸೇವೆ ಸೇರಿ ಹಲವು ಸೇವೆಗಳ ವ್ಯತ್ಯಯವಾಗುತ್ತಿದೆ. ಅದನ್ನು ನೀಗಿಸಲು ಮನೆಯಲ್ಲಿ ಕೂರದೆ ಸ್ನೇಹಿತರೊಬ್ಬರ ಆಂಬುಲೆನ್ಸ್ ಪಡೆದು ಸ್ವತಃ ಡ್ರೈವರ್ ಆಗಿದ್ದರು ಚಂದನವನದ ನಟ ಅರ್ಜುನ್ ಗೌಡ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರರಂಗದವರ ಬೆನ್ನಿಗೆ ನಿಂತಿದ್ದಾರೆ.

ಹೌದು, ಈಗಾಗಲೇ ಸಾಕಷ್ಟು ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸುವುದು, ಆಸ್ಪತ್ರೆಯಿಂದ ಮನೆಗೆ ತಲುಪಿಸುವುದು, ಆಕ್ಸಿಜನ್ ಪೂರೈಕೆ, ಚಿತಾಗಾರಕ್ಕೆ ಶವ ರವಾನೆ ಸೇರಿ ಸಾಕಷ್ಟು ಸೇವೆ ಮಾಡಿರುವ ಅರ್ಜುನ್ ಗೌಡ ಇದೀಗ ಚಿತ್ರರಂಗದವರಿಗೆ ಸಹಾಯಕ್ಕೆ ಆಗಮಿಸಿದ್ದಾರೆ. ಅಂದರೆ, ಚಿತ್ರೋದ್ಯಮದವರಿಗೆ ಯಾರಿಗಾದರೂ ಆಂಬುಲೆನ್ಸ್ ಸೇವೆ ಅವಶ್ಯಕತೆ ಇದ್ದರೆ ಅರ್ಜುನ್ ಗೌಡ ಅವರಿಗೆ ಕರೆ ಮಾಡಿದರೆ, ಆಂಬುಲನ್ಸ್​ ಜತೆಗೆ ನಿಮ್ಮ ಮನೆ ಬಳಿ ಹಾಜರಿ ಹಾಕುತ್ತಾರೆ.

ಅಂದಹಾಗೆ ಅರ್ಜುನ್ ಅವರನ್ನು ಸಂಪರ್ಕಿಸಬೇಕೆಂದರೆ 9986006669 ನಂಬರ್​ಗೆ ಕರೆ ಮಾಡಬಹುದಾಗಿದೆ. ವಿಶೇಷ ಏನೆಂದರೆ ಈ ಸೇವೆ ಸಂಪೂರ್ಣ ಉಚಿತವಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸ್ವತಃ ಅರ್ಜುನ್ ಗೌಡ ಹೇಳಿಕೊಂಡಿದ್ದಾರೆ.

ಕನ್ನಡದ ಜತೆಗೆ ತೆಲುಗು, ತಮಿಳು ಚಿತ್ರರಂಗದಲ್ಲಿಯೂ ಗುರುತಿಸಿಕೊಂಡ ಅರ್ಜುನ್ ಗೌಡ, ಇತ್ತೀಚೆಗಷ್ಟೇ ಯುವರತ್ನ ಚಿತ್ರದಲ್ಲಿ ಕಿರು ಪಾತ್ರದ ಮೂಲಕ ಎದುರಾಗಿದ್ದರು. ಇನ್ನುಳಿದಂತೆ ಬೇರೆ ಬೇರೆ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದರು. ಇದೀಗ ಕೋವಿಡ್ ಟೈಮ್​ನಲ್ಲಿ ರಿಯಲ್ ಹೀರೋ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net