ಮನಸ್ತಾಪ ಇರುವುದು ನಿಜ; ಪ್ರತ್ಯೇಕವಾಗಿ ಪ್ರಚಾರ ಮಾಡಲು ಅಜಯ್ ನಿರ್ಧಾರ

Ajay Rao
Published on

ಬೆಂಗಳೂರು: ‘ಲವ್ ಯೂ ರಚ್ಚು’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ನಾಯಕ ಅಜೇಯ್ ಬರದಿರುವುದು, ಚಿತ್ರದ ಪ್ರಚಾರ ಮಾಡದಿರುವುದು ಸಾಕಷ್ಟು ವಿವಾದವಾಗಿತ್ತು. ಅಜೇಯ್ ಮತ್ತು ‘ಲವ್ ಯೂ ರಚ್ಚು’ ಚಿತ್ರತಂಡದ ಮಧ್ಯೆ ಎಲ್ಲವೂ ಸರಿ ಇದೆಯೇ? ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಅಜೇಯ್ ಉತ್ತರ ಕೊಟ್ಟಿದ್ದಾರೆ. ತಮಗೆ ಅವಮಾನ ಆಗಿರುವುದರಿಂದ, ನಿರ್ವಪಕರ ಜತೆಗೆ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನನ್ನ ಮತ್ತು ನಿರ್ವಪಕರ ನಡುವೆ ಕೆಲವು ವಿಚಾರಗಳ ಕುರಿತು ಮನಸ್ಥಾಪ ಇದೆ. ನನಗೆ ನಿರ್ವಪಕರಿಂದ ಆದ ಅವಮಾನದಿಂದ ನಾನು ಭಾಗವಹಿಸುತ್ತಿಲ್ಲ. ನನಗೂ ಆತ್ಮಗೌರವ ಇದೆ. ಅವಮಾನ ಆದರೂ ಅವರ ಜತೆಗೆ ಕುಳಿತು ಪ್ರಚಾರ ಮಾಡುವುದಕ್ಕೆ ನನಗೆ ಇಷ್ಟ ಇಲ್ಲ’ ಎನ್ನುತ್ತಾರೆ ಅಜೇಯ್.

ತಮ್ಮದೇ ರೀತಿಯಲ್ಲಿ ಪ್ರಚಾರ ಮಾಡುವುದಾಗಿ ಹೇಳುವ ಅಜೇಯ್, ‘ನಮ್ಮಿಬ್ಬರ ಮಧ್ಯೆ ಸರಿ ಹೋಗುತ್ತಿಲ್ಲ ಎಂದರೂ ಒಟ್ಟಿಗೆ ಬಂದು ಜನರ ಮುಂದೆ ಮುಖವಾಡ ಹಾಕಿಕೊಂಡು ಮಾತನಾಡುವ ವ್ಯಕ್ತಿ ನಾನಲ್ಲ. ನಾನು ಯಾವತ್ತೂ ನೇರವಾಗಿ ಮಾತನಾಡುವವನು. ನನಗೂ ‘ಲವ್ ಯೂ ರಚ್ಚು’ ಸಿನಿಮಾ ಬಗ್ಗೆ ಪ್ರೀತಿ ಇದೆ. ಹಾಗಾಗಿ, ನಾನು ನನ್ನದೇ ರೀತಿಯಲ್ಲಿ ಪ್ರಚಾರ ಮಾಡುತ್ತೇನೆ. ಅವರು ಅವರ ಕಡೆಯಿಂದ ಮಾಡಲಿ. ಒಟ್ಟಿಗೆ ಪ್ರಚಾರ ಮಾಡುವುದಕ್ಕೆ ಸಾಧ್ಯವಿಲ್ಲ ಅಷ್ಟೇ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net