

| ಹರ್ಷವರ್ಧನ್ ಬ್ಯಾಡನೂರು
"ಮಾರ್ಟಿನ್' ರಿಲೀಸ್ ಬಳಿಕ ಧ್ರುವ ಸರ್ಜಾ "ಕೆಡಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಪ್ರೇಮ್ ನಿರ್ದೇಶನ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಮೆಗಾ ಬಜೆಟ್ ಸಿನಿಮಾದಲ್ಲಿ ಧ್ರುವಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಎರಡು ಹಾಡುಗಳಷ್ಟೇ ಬಾಕಿಯಿವೆ. ವಿಎ್ಎಕ್ಸ್ ಕೆಲಸಗಳು ಹೆಚ್ಚಿರುವ ಕಾರಣ, ಈ ತಿಂಗಳು ತೆರೆಗೆ ಬರಬೇಕಿದ್ದ "ಕೆಡಿ'ಯನ್ನು ಹೊಸ ವರ್ಷಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಧ್ರುವ ಸರ್ಜಾ, "ನನ್ನ ಸಿನಿಮಾಗಳು ತಡವಾಗುತ್ತಿವೆ ಎಂಬ ಮಾತಿದೆ ನಿಜ. ಹಾಗಂತ ನಾನು ಅದಕ್ಕೆ ಅವರು, ಇವರು ಕಾರಣ ಅಂತ ಹೇಳಲು ಇಷ್ಟಪಡಲ್ಲ. ಒಳ್ಳೆ ಸಿನಿಮಾ ಮಾಡುತ್ತೇನೆ ಅಂತ ಮಾತ್ರ ಪ್ರಾಮಿಸ್ ಮಾಡಬಲ್ಲೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದೇನೆ. ಮುಂದಿನ ವರ್ಷ ನನ್ನ ಮೂರು ಸಿನಿಮಾ ರಿಲೀಸ್ ಆದರೂ ಆಶ್ಚರ್ಯವಿಲ್ಲ. ಆದರೆ, "ಕೆಡಿ' ಸೇರಿ ಎರಡು ಚಿತ್ರಗಳ ಬಿಡುಗಡೆ ಪಕ್ಕಾ' ಎಂದು ಮಾಹಿತಿ ನೀಡುತ್ತಾರೆ.
ಅಭಿಮಾನಿಗಳಿಗೆ ಏನಿಷ್ಟವೋ, ಅದು ಮಾಡುವೆ:
"ಮಾರ್ಟಿನ್' ಚಿತ್ರ ಕಮರ್ಷಿಯಲ್ಆಗಿ ಸೋತರೂ "ಏನೂ ಬದಲಾವಣೆ ಆಗಿಲ್ಲ' ಎನ್ನುವ ಧ್ರುವ, "ಮೊದಲಿನಿಂದಲೂ ವಿಭಿನ್ನವಾಗಿ ಏನಾದರೂ ಪ್ರಯತ್ನ ಮಾಡಬೇಕು ಅಂತಿದ್ದೆ. ಅದೇ ಕಾರಣಕ್ಕೆ "ಮಾರ್ಟಿನ್' ಮಾಡಿದ್ದು. ಪ್ರತಿ ಚಿತ್ರದಲ್ಲೂ ಕಲಿಯುವುದಿರುತ್ತದೆ. ಅದೇ ರೀತಿ "ಮಾರ್ಟಿನ್'ನಲ್ಲಿ ಜನರಿಗೆ ಏನು ಇಷ್ಟವಾಯಿತು? ಏನು ಇಷ್ಟವಾಗಲಿಲ್ಲ? ಎರಡನ್ನೂ ಹೇಳಿದ್ದಾರೆ. ಅವರಿಗೆ ಏನಿಷ್ಟವೋ ಅದನ್ನು ಕೊಡುವುದು ನನ್ನ ಕರ್ತವ್ಯ. ಮುಂದೆ ಅವರು ನಿರೀಸುವಂತಹ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇಷ್ಟಪಡದವರೂ ನನ್ನನ್ನು ಇಷ್ಟಪಡಬೇಕು ಅಂತಹ ಪಾತ್ರಗಳನ್ನು ಮಾಡಬೇಕು. ಎಲ್ಲರನ್ನೂ ಖುಷಿ ನೀಡುವ ಪ್ರಯತ್ನವಷ್ಟೇ' ಎನ್ನುತ್ತಾರೆ.
ಬಂದೇ ಬರುತ್ತೆ "ರೈನೋ'
"ಮಾರ್ಟಿನ್' ಸೀಕ್ವೆಲ್ "ರೈನೋ' ಬಗ್ಗೆ ಧ್ರುವ, ""ರೈನೋ' ಪಕ್ಕಾ ಆಗುತ್ತೆ. ಉದಯ್ ಕೆ. ಮೆಹ್ತಾ ಅವರೇ ನಿರ್ಮಿಸಲಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಕೆಲ ಚಿತ್ರಗಳನ್ನು ಪೂರ್ಣಗೊಳಿಸಿ ನಂತರ "ರೈನೋ' ಪ್ರಾರಂಭಿಸಲಿದ್ದೇವೆ. ಸ್ವಲ್ಪ ತಡವಾಗಬಹುದಷ್ಟೇ' ಎಂದು ಸ್ಪಷ್ಟನೆ ನೀಡುತ್ತಾರೆ.
ಕಥೆ ಮುಖ್ಯ
"ಪಾತ್ರಕ್ಕಿಂತ ಕಥೆ ಮುಖ್ಯ' ಎನ್ನುವ ಧ್ರುವ, "50ರಿಂದ 60 ಕಥೆಗಳನ್ನು ಕೇಳಿದ್ದೇನೆ. ನಿರ್ದೇಶಕರು ಹಳಬರಾಗಲಿ, ಹೊಸಬರಾಗಲಿ ಕಥೆ ಇಷ್ಟವಾದರೆ ಸಿನಿಮಾ ಮಾಡುತ್ತೇನೆ. ನನಗೆ ಕಥೆ ಮುಖ್ಯ' ಎಂದು ಹೇಳಿಕೊಳ್ಳುತ್ತಾರೆ.
ಪರಭಾಷೆಗೆ ಹೋಗಲ್ಲ
ಪರಭಾಷೆಗಳಿಂದ ಅವಕಾಶಗಳು ಬರುತ್ತಿದ್ದರೂ, ಧ್ರುವ ಒಪ್ಪಿಲ್ಲವಂತೆ. ಅದಕ್ಕೆ, "ತೆಲುಗು, ತಮಿಳಿನಲ್ಲಿ ಅವಕಾಶಗಳು ಬಂದವು. ಆದರೆ, ನಾನು ಒಪ್ಪಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸಲ್ಲ. ಕನ್ನಡದಲ್ಲೇ ಚಿತ್ರೀಕರಣ ನಡೆಸಿ, ನಂತರ ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಿದ್ದೇವೆ' ಎನ್ನುತ್ತಾರೆ.
ಅರ್ಜುನ್ ಜತೆಗೆ ಸಿನಿಮಾ:
ಚಿಕ್ಕಪ್ಪ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿದ್ದ "ಪ್ರೇಮ ಬರಹ' ಚಿತ್ರದ ಹಾಡೊಂದರಲ್ಲಿ ಅರ್ಜುನ್ ಸರ್ಜಾ, ಚಿರು ಮತ್ತು ಧ್ರುವ ನಟಿಸಿದ್ದರು. ಇನ್ನು "ಮಾರ್ಟಿನ್'ಗೆ ಅರ್ಜುನ್ ಸರ್ಜಾ ಕಥೆ ಮಾಡಿದ್ದರು. ಇದೀಗ ಚಿಕ್ಕಪ್ಪ ಅರ್ಜುನ್ ಜತೆ ಸಿನಿಮಾ ಮಾಡಲಿರುವ ಬಗ್ಗೆ ಧ್ರುವ, "ನಮ್ಮ ಹೋಮ್ ಬ್ಯಾನರ್ನಲ್ಲೇ ನನ್ನ ಮತ್ತು ಅರ್ಜುನ್ ಅಂಕಲ್ ಕಾಂಬಿನೇಷನ್ ಸಿನಿಮಾ ಮಾಡುವ ಸಾಧ್ಯತೆಯಿದೆ. ಕೆಲ ದಿನಗಳಲ್ಲಿ ಅನೌನ್ಸ್ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.