ಲಾಕ್​ಡೌನ್​ ಬಳಿಕ 25 ದಿನ ಪೂರೈಸಿದ ಮೊದಲ ಸಿನಿಮಾ ಆ್ಯಕ್ಟ್ 1978

Act 1978 - Final
Published on

ಬೆಂಗಳೂರು: ಲಾಕ್​ಡೌನ್​ ಬಳಿಕ ಕನ್ನಡದ ಮೊದಲ ಹೊಸ ಸಿನಿಮಾ ಬಿಡುಗಡೆ ಆಗಿದ್ದು ಮಂಸೋರೆ ನಿರ್ದೇಶನದ 'ಆ್ಯಕ್ಟ್ 1978'. ಇದೀಗ ಈ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ.

ಈ ಖುಷಿಯ ವಿಚಾರಕ್ಕೆ ಇಡೀ ತಂಡ ಇತ್ತೀಚೆಗೆ ಮಾಧ್ಯಮದವರ ಮುಂದೆ ಬಂದು ಸಂತೋಷ ಹಂಚಿಕೊಂಡಿತು. ಕೊರೊನಾ ಭಯದ ನಡುವೆಯೂ ಚಿತ್ರವು 25 ದಿನ ಪೂರೈಸಿದ ಬಗೆಯನ್ನು ಚಿತ್ರತಂಡದವರು ಹಂಚಿಕೊಂಡರು.

ನನಗೆ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದ ಹಿರಿಯ ನಟ ದತ್ತಣ್ಣ, 'ಎರಡನೇ ದಿನ ನಾನು ಈ ಸಿನಿಮಾ ನೋಡಿದೆ. ನಾನು ಸಿನಿಮಾವನ್ನು ವಿಮರ್ಶಾತ್ಮಕವಾಗಿ ನೋಡ್ತೇನೆ. ಯಾವ ಸಿನಿಮಾವನ್ನೂ ನಾನು ಅಷ್ಟು ಸುಲಭವಾಗಿ ಮೆಚ್ಚಿಕೊಳ್ಳುವುದಿಲ್ಲ. ಈ ಸಿನಿಮಾ ತುಂಬ ಹಿಡಿಸಿತು. ಹಲವು ಜನರಿಗೆ ಹೇಳಿದ್ದೆ. ಚಿತ್ರಮಂದಿರದಲ್ಲಿ ಡಿಸಿಪ್ಲೇನ್ ಮೇಂಟೆನ್ ಮಾಡಿದ್ದಾರೆ ಬಂದು ನೋಡ್ರಪ್ಪ ಎಂದಿದ್ದೆ. ಅದರಂತೆ ಇದೀಗ 25 ದಿನ ಪೂರೈಸಿದೆ’ ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ' ಎಂದರು.

ಈ ಚಿತ್ರ ಕಮರ್ಷಿಯಲ್ ಹಿಟ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನಮ್ಮ ಸಂತೋಷಕ್ಕೆ ಸಿನಿಮಾ ಮಾಡಿದರಾಯ್ತು ಎಂದು ಈ ಸಿನಿಮಾ ಪ್ರಾರಂಭಿಸಿದರಂತೆ ನಿರ್ಮಾಪಕ ದೇವರಾಜ್​. ಇದೀಗ ಚಿತ್ರವು 25ನೇ ದಿನ ಮುಗಿಸಿ ಮುನ್ನುಗ್ಗುತ್ತಿದ್ದು ಅವರಿಗೆ ಖುಷಿ ತಂದಿದೆ. 'ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸಿನಿಮಾ ನೋಡಿ ಪಿಡಿಒ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ನಾವು ಅಂದುಕೊಂಡ ಕೆಲಸ ಸಾರ್ಥಕವಾಯ್ತು’ ಎಂದರು.

ಸಂಚಾರಿ ವಿಜಯ್ ಸಹ ಸಿನಿಮಾಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಸಂತಸದಲ್ಲಿದ್ದಾರೆ. ಇಡೀ ತಂಡ ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್​ಗಳಿಗೆ ಹೋಗಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆದುಕೊಂಡು ಬಂದಿರುವ ಬಗ್ಗೆ ಅವರು ಹೇಳಿಕೊಂಡರು. ಅದೇ ರೀತಿ ಛಾಯಾಗ್ರಾಹಕ ಸತ್ಯ ಹೆಗಡೆ, 'ಇದೊಂದು ನೋಡುವ ಸಿನಿಮಾ ಅಲ್ಲ, ಕಾಡುವ ಸಿನಿಮಾ' ಎಂದು ಬಣ್ಣಿಸಿದರು.

ಡಿ ಕ್ರಿಯೇಷನ್ಸ್ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗಿರುವ 'ಆ್ಯಕ್ಟ್ 1978' ಚಿತ್ರವನ್ನು ಮಂಸೋರೆ ನಿರ್ದೇಶನ ಮಾಡಿದ್ದಾರೆ. ಟಿ.ಕೆ ದಯಾನಂದ್ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದರೆ, ನಾಗೇಂದ್ರ ಅವರ ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net