

ಹೈದರಾಬಾದ್: ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಚಿತ್ರವು ದೀಪಾವಳಿಗೆ ಬಿಡುಗಡೆಯಾಗುತ್ತದೆ ಎಂಬ ಸುದ್ದಿಯೊಂದು, ಅವರ ಅಭಿಮಾನಿಗಳನ್ನು ಸಖತ್ ಖುಷಿಪಡಿಸಿದೆ. ಈಗ ಚಿರಂಜೀವಿ ಅಭಿಮಾನಿಗಳನ್ನು ಖುಷಿಪಡಿಸುವ ಸುದ್ದಿಯೊಂದು ಕೇಳಿಬಂದಿದ್ದು, 'ಆಚಾರ್ಯ' ಚಿತ್ರ ದಸರಾಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಹೌದು, ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವು ದಸರಾ ಸಮಯದಲ್ಲಿ ಅಂದರೆ, ಅಕ್ಟೋಬರ್ 15ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಬಂದಿದೆ. ಆದರೆ, ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಮುಗಿಸಿ, ಆ ನಂತರ ಚಿತ್ರತಂಡವು ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ.
ಅಂದಹಾಗೆ, 'ಆಚಾರ್ಯ' ಚಿತ್ರದ ಬಾಕಿ ಇರುವ ಚಿತ್ರೀಕರಣ ಜುಲೈ 07ರಿಂದ ಪ್ರಾರಂಭವಾಗುತ್ತಿದೆ. ಒಂದು ಹಾಡು, ಒಂದು ಫೈಟ್ ಜತೆಗೆ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಮುಂದಿನ ಒಂದು ತಿಂಗಳಲ್ಲಿ ಬಾಕಿ ಇರುವ ಚಿತ್ರೀಕರಣವನ್ನು ಮುಗಿಸುವುದಕ್ಕೆ ನಿರ್ದೇಶಕ ಕೊರಟಾಲ ಶಿವ ಸ್ಕೆಚ್ ಹಾಕಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್ನಲ್ಲಿ ಚಿತ್ರೀಕರಣ ಸಂಪೂರ್ಣವಾದ ನಂತರ ಬಾಕಿ ಕೆಲಸಗಳನ್ನೆಲ್ಲ ಮುಗಿಸಿಕೊಂಡು, ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಐಡಿಯಾ ಎಂದು ಹೇಳಲಾಗುತ್ತಿದೆ.
'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಜತೆಗೆ ಅವರ ಮಗ ರಾಮ್ಚರಣ್ ತೇಜ ಸಹ ನಟಿಸುತ್ತಿದ್ದು, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ, ಸೋನು ಸೂದ್ ಮುಂತಾದವರು ನಟಿಸುತ್ತಿದ್ದಾರೆ.