ಎಲ್ಲವೂ ನಿಮ್ಮ ಕೈಯಲ್ಲಿದೆ ... ಹಾಗಂತ ಅಭಿಷೇಕ್​ ಹೇಳಿದ್ದ್ಯಾಕೆ?

Abhishek Bachchan - Final
Published on

ಮುಂಬೈ: ಬಾಲಿವುಡ್​ ಹೀರೋಗಳಲ್ಲಿ ಅಭಿಷೇಕ್​ ಬಚ್ಚನ್​ ಅವರಷ್ಟು ಟ್ರೋಲ್​ ಆಗುವ ಮತ್ತೊಬ್ಬ ಹೀರೋ ಸಿಗುವುದು ಕಷ್ಟ. ಅಭಿಷೇಕ್​ ಸೋಲುಗಳ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ವಿಪರೀತ ಎನ್ನುವಷ್ಟು ಆಗಾಗ ಟ್ರೋಲ್​ ಮಾಡಲಾಗುತ್ತಿರುತ್ತದೆ. ಅದೆಷ್ಟೇ ಟ್ರೋಲ್​ ಆದರೂ, ಅಭಿಷೇಕ್​ ಮಾತ್ರ ತಾಳ್ಮೆಯಿಂದ ಇರುತ್ತಾರೆ ಮತ್ತು ತಮ್ಮನ್ನು ಬಯ್ದವರಿಗೆ ಪ್ರೀತಿಯಿಂದ ಉತ್ತರ ಕೊಡುತ್ತಾರೆ ಎನ್ನುವುದು ವಿಶೇಷ.

ಇದನ್ನೂ ಓದಿ: ಫಿಕ್ಸ್​ ಆಯ್ತು ‘ಬೆಲ್​ ಬಾಟಮ್​’ ರಿಲೀಸ್​ ಡೇಟ್​ … ಬಿಡುಗಡೆ ಯಾವಾಗ ಗೊತ್ತಾ?

ಈಗ್ಯಾಕೆ ಈ ವಿಷಯ ಎಂದರೆ, ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಅಭಿಷೇಕ್​ ಅವರ ಕಾಲೆಳೆಯಲಾಗಿದೆ ಮತ್ತು ಅವರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೂ ಆಗಿದ್ದೇನೆಂದರೆ, ಕೇಂದ್ರ ಸರ್ಕಾರ ಅನ್​ಲಾಕ್​-5 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್​ 15ರಿಂದ ಸಿನಿಮಾ ಪ್ರದರ್ಶನ ಪ್ರಾರಂಭಿಸಬಹುದು ಎಂದು ತಿಳಿಸಿದೆ.

ಈ ಕುರಿತು ಅಭಿಷೇಕ್​, ಸೋಷಿಯಲ್​ ಮೀಡಿಯಾದಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತೆ ಚಿತ್ರ ಪ್ರದರ್ಶನ ಪ್ರಾರಂಭವಾದರೆ, ಎಲ್ಲವೂ ಮೊದಲಿನಂತಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಕುರಿತು ನೆಟ್ಟಿಗರೊಬ್ಬರು ಉತ್ತರ ಕೊಟ್ಟಿದ್ದು, 'ಸಿನಿಮಾ ಪ್ರಾರಂಭವಾದರೇನು? ನಿನಗೆ ಮಾತ್ರ ಕೆಲಸ ಸಿಗುವುದಿಲ್ಲ' ಎಂದು ಕಾಲೆಳೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಷೇಕ್​, 'ಅದೆಲ್ಲವೂ ಪ್ರೇಕ್ಷಕರ ಕೈಯಲ್ಲಿವೆ. ಪ್ರೇಕ್ಷಕರಿಗೆ ನಮ್ಮ ಕೆಲಸ ಇಷ್ಟವಾಗದಿದ್ದರೆ, ಕೆಲಸ ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ, ನಿಮ್ಮನ್ನು ಮೆಚ್ಚಿಸುವುದಕ್ಕೆ ಬಹಳ ಕಷ್ಟಪಡಬೇಕಾಗುತ್ತದೆ' ಎಂದು ಉತ್ತರಿಸಿದ್ದಾರೆ.

ಇನ್ನು ನೆಟ್ಟಿಗರೊಬ್ಬರು, 'ದ್ರೋಣ'ದಂತಹ ಸೂಪರ್​ ಫ್ಲಾಪ್​ ಸಿನಿಮಾ ಕೊಟ್ಟ ಮೇಲೂ ನಿಮಗೆ ಅವಕಾಶ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಷೇಕ್​, 'ಆ ಚಿತ್ರವಾದ ನಂತರ ನನಗೆ ಕೆಲಸ ಸಿಗಲಿಲ್ಲ. ಅವಕಾಶ ಸಿಕ್ಕಿದ್ದ ಚಿತ್ರಗಳು ಸಹ ಕೈಬಿಟ್ಟುಹೋದವು. ಹಾಗಾಂತ ನಂಬಿಕೆ ಮತ್ತು ನಿರೀಕ್ಷೆಗಳನ್ನು ಕೈಬಿಡಬಾರದು. ಗುರಿ ಇಟ್ಟುಕೊಂಡರು ಅದನ್ನು ಸಾಧಿಸುವುದಕ್ಕೆ ಹೋರಾಡುತ್ತಿರಲೇಬೇಕು. ನೀವು ಈ ಜಗತ್ತಿನಲ್ಲಿ ಬದುಕಬೇಕೆಂದರೆ, ಪ್ರತೀ ದಿನ ಫೈಟ್​ ಮಾಡುತ್ತಲೇ ಇರಬೇಕು. ಇಲ್ಲಿ ಯಾವುದೂ ಸುಲಭವಲ್ಲ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net