

ಬೆಂಗಳೂರು: ಅನೀಶ್ ತೇಜೇಶ್ವರ್ ಅಭಿನಯದ 'ಬೆಂಕಿ' ಎಂಬ ಚಿತ್ರ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಬಾಕ್ಸ್-ಆಫೀಸ್ನಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡದ ಈ ಚಿತ್ರದ ನಂತರ ಅನೀಶ್ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅವರು ಹೊಸದೊಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದು, ಈ ಚಿತ್ರವನ್ನು ಅಭಿಷೇಕ್ ಶೆಟ್ಟ ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳನ್ನು ನಿರ್ದೇಶಿಸುವುದರ ಜತೆಗೆ, ಆ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು ಅಭಿಷೇಕ್. ಈ ಚಿತ್ರಗಳಲ್ಲಿನ ಅವರ ಕೆಲಸ ನೋಡಿ ಖುಷಿಯಾಗಿರುವ ಅನೀಶ್, ಅಭಿಷೇಕ್ ಜತೆಗೆ ಚಿತ್ರ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಲಿದ್ದು, ಇದರಲ್ಲಿ ಅನೀಶ್ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರಂತೆ. ಇದುವರೆಗೂ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ವಿಭಿನ್ನವಾಗಿರಲಿದ್ದು, ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಇನ್ನೂ ಹೆಸರಿಡದ ಈ ಚಿತ್ರವನ್ನು 'ಅಕಿರಾ' ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, 'ಗುಳ್ಟು' ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.