ನಿಮಗೆ ನಮ್ಮ ಸ್ಥಿತಿ ಯಾವತ್ತೂ ಬಾರದಿರಲಿ ... ಟ್ರೋಲಿಗರ ಬಾಯಿ ಮುಚ್ಚಿಸಿದ ಅಭಿಷೇಕ್​

Abhishek Bachchan - Final
Published on

ಇತ್ತೀಚೆಗಷ್ಟೇ ಅಮಿತಾಭ್​ ಬಚ್ಚನ್​, ಸೋಷಿಯಲ್​ ಮೀಡಿಯಾದಲ್ಲಿ ಕೆಲವರ ಮಾತಿನಿಂದ ಬಹಳ ನೊಂದಿದ್ದರು. ಕೋವಿಡ್​-19ನಿಂದ ನೀವು ಸಾಯುವಂತಾಗಲೀ ಎಂದು ಯಾರೋ ಹೇಳಿದ್ದನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಅಷ್ಟೇ ಅಲ್ಲ, ತಮ್ಮದೇ ರೀತಿಯಲ್ಲಿ ಟ್ರೋಲ್​ ಮಾಡಿದವರಿಗೆ ಉತ್ತರ ಕೊಟ್ಟಿದ್ದರು. ಈಗ ಅಮಿತಾಭ್​ ಬಚ್ಚನ್​ ಅವರ ಮಗ ಅಭಿಷೇಕ್​ಗೆ ಸಹ ಇದೇ ರೀತಿ ಸೋಷಿಯಲ್​ ಮೀಡೊಯಾದಲ್ಲಿ ಜನ ಟ್ರೋಲ್​ ಮಾಡುತ್ತಿದ್ದಾರೆ.

ಅಭಿಷೇಕ್​ಗೆ ಈ ಟ್ರೋಲಿಂಗ್​ ಹೊಸದೇನಲ್ಲ. ಅವರು ಸೋಷಿಯಲ್​ ಮೀಡಿಯಾಗೆ ಎಂಟ್ರಿ ಕೊಟ್ಟಾಗಿನಿಂದಲೂ ಈ ತರಹ ಸಾಕಷ್ಟು ನೋಡಿದ್ದಾರೆ ಅವರು. ಆದರೂ ಪದೇಪದೇ ಜನ ಅವರ ಕೆಣಕುತ್ತಲೇ ಇರುತ್ತಾರೆ. ಇತ್ತೀಚೆಗೆ ಸಹ ಅದು ಮತ್ತೊಮ್ಮೆ ಮುಂದುವರೆದಿದೆ.

ಅಭಿಷೇಕ್​ ಬಚ್ಚನ್​ ಅವರು ನಾನಾವತಿ ಆಸ್ಪತ್ರೆಯಲ್ಲಿ ಕರೊನಾಗೆ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ. 20 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಟ್ರೋಲ್​ ಮಾಡಿರುವ ಒಬ್ಬರು, ನಿಮ್ಮ ತಂದೆ ಆಸ್ಪತ್ರೆಗೆ ದಾಖಲಾಗಿರುವುದರಿಂದ, ನಿಮಗೆ ಊಟ ಹಾಕೋದು ಯಾರು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಬಹಳ ತಾಳ್ಮೆಯಿಂದ ಉತ್ತರ ಕೊಟ್ಟಿರುವ ಅಭಿಷೇಕ್​, 'ಆ ವಿಷಯದ ಬಗ್ಗೆ ಗೊತ್ತಿಲ್ಲ. ಸದ್ಯಕ್ಕೆ ನಾನು ನನ್ನ ತಂದೆ ಮಲಗಿಕೊಂಡು ಊಟ ಮಾಡುತ್ತಿದ್ದೇವೆ' ಎಂದು ಉತ್ತರಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ, 'ಎಲ್ಲರಿಗೂ ಮಲಗಿಕೊಂಡು ಊಟ ಮಾಡುವ ಯೋಗ ಇರುವುದಿಲ್ಲ' ಎಂದು ಹೇಳಿದ್ದಾರೆ.

ಈ ಮಾತು ಕೇಳಿ ಅಭಿಷೇಕ್​ಗೆ ಪಿತ್ತ ನೆತ್ತಿಗೇರಿತ್ತೇನೋ ಗೊತ್ತಿಲ್ಲ. ಆದರೆ, ಅವರು ಬಹಳ ತಾಳ್ಮೆಯಿಂದ, ಅಷ್ಟೇ ನಯವಾಗಿ ಕಾಲೆಳೆಯುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ. 'ನಿಮಗೆ ನಮ್ಮ ಸ್ಥಿತಿ ಯಾವತ್ತೂ ಬಾರದಿರಲಿ. ನಿಮ್ಮ ಹಾರೈಕೆಗೆ ಧನ್ಯವಾದ. ಆರೋಗ್ಯ ಕಾಪಾಡಿಕೊಳ್ಳಿ' ಎಂದು ಮಾತು ಮುಗಿಸಿದ್ದಾರೆ.

ಇದು ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಎದುರಿಸುತ್ತಿರುವ ಟ್ರೋಲಿಂಗ್​. ಸೆಲೆಬ್ರಿಟಿಗಳು ಯಾಕೆ ಸೋಷಿಯಲ್​ ಮೀಡಿಯಾದಿಂದ ದೂರ ಉಳಿಯುತ್ತಿದ್ದಾರೆ ಎಂದರೆ, ಅದಕ್ಕೊಂದು ಉದಾಹರಣೆ ಇದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net