

ಸುದೀಪ್ ಅವರಿಗೆ 'ಅಭಿನಯ ಚಕ್ರವರ್ತಿ', 'ಆರಡಿ ಕಟೌಟ್' ಸೇರಿದಂತೆ ಹಲವು ಬಿರುದುಗಳಿವೆ. ಆದರೆ, ಅಭಿಮಾನಿಗಳು ಈಗಲೂ ಅವರನ್ನು ಕರೆಯುವುದು 'ಕಿಚ್ಚ' ಸುದೀಪ್ ಅಂತಲೇ. ಇದು ಯಾರೋ ಕೊಟ್ಟ ಬಿರುದಲ್ಲ. ಅವರದೇ ಪಾತ್ರವೊಂದರ ಹೆಸರು.
'ಹುಚ್ಚ' ಚಿತ್ರಕ್ಕೂ ಮುನ್ನ ಸುದೀಪ್ ಅವರು 'ತಾಯವ್ವ', 'ಸ್ಪರ್ಶ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿದ್ದು 'ಹುಚ್ಚ' ಚಿತ್ರದ 'ಕಿಚ್ಚ'ನ ಪಾತ್ರ. ಈ ಪಾತ್ರ ಅದೆಷ್ಟು ಜನಪ್ರಿಯವಾಯಿತು ಎಂದರೆ, ಮುಂದಿನ ದಿನಗಳಲ್ಲಿ 'ಕಿಚ್ಚ' ಎಂಬ ಹೆಸರಿನ ಚಿತ್ರ ಸಹ ನಿರ್ಮಾಣವಾಯಿತು.
ಈಗ್ಯಾಕೆ ಈ ವಿಷಯ ಎಂದರೆ, ಸುದೀಪ್ ಅಭಿಮಾನಿಯೊಬ್ಬರು, ಸುದೀಪ್ ಅವರ ಫೋಟೋವೊಂದನ್ನು ಇಟ್ಟುಕೊಂಡು, 'ಕಿಚ್ಚ ಫಾರೆವರ್' ಎಂಬ ಹೊಸ ಪೋಸ್ಟರ್ ಮಾಡಿದ್ದಾರೆ. ಇದನ್ನು ಸುದೀಪ್ ಅವರಿಗೆ ಟ್ವಿಟರ್ನಲ್ಲಿ ಟ್ಯಾಗ್ ಸಹ ಮಾಡಿದ್ದಾರೆ.
ಇದನ್ನು ನೋಡಿ ಖುಷಿಯಾಗಿರುವ ಸುದೀಪ್, ಪೋಸ್ಟರ್ ಡಿಸೈನ್ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. 'ಹೌದು, ಕಿಚ್ಚ ಎನ್ನುವುದು ನನ್ನ ಗುರುತು. ಈ ಗುರುತು ನೀವೆಲ್ಲಾ ನನಗೆ ಕೊಟ್ಟ ಗಿಫ್ಟ್. ಇದನ್ನು ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ. ನೀವೆಲ್ಲಾ ನನ್ನನ್ನು ಕಿಚ್ಚ ಎಂದು ಪ್ರೀತಿಸಿದ್ದೀರಾ. ನಾನು ಕಿಚ್ಚನಾಗಿಯೇ ನಿಮ್ಮನ್ನೆಲ್ಲಾ ಪ್ರೀತಿಸುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಡಿಸೈನ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಅಂದಹಾಗೆ, ಸುದೀಪ್ ಸದ್ಯ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ 'ಫ್ಯಾಂಟಮ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಕಳೆದ ಎರಡು ವಾರಗಳಿಂದ ಅವರು ಅಲ್ಲೇ ಇದ್ದು ಚಿತ್ರೀಕರಣ ಮಾಡುತ್ತಿದ್ದಾರೆ.