ರಗಡ್ ಅವತಾರದಲ್ಲಿ ಜೂ. ರೆಬೆಲ್ ; ರಿಲೀಸ್​ ಆಯಿತು ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಹೊಚ್ಚ ಹೊಸ ಹಾಡು

Bad Manners (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಪಾಪ್‌ಕಾರ್ನ್ ಮಂಕಿ ಟೈಗರ್’ ತೆರೆಗೆ ಬಂದ ಮೂರು ವರ್ಷಗಳ ಬಳಿಕ ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ‘ಬ್ಯಾಡ್ ಮ್ಯಾನರ್ಸ್’. 2019ರಲ್ಲಿ ‘ಅಮರ್’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡಿದ ಅಭಿಷೇಕ್ ಅಂಬರೀಶ್, ನಾಲ್ಕು ವರ್ಷಗಳ ನಂತರ ವಿಭಿನ್ನ ಅವತಾರದಲ್ಲಿ ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟ್ರ್ಯಾಕ್ ಮತ್ತು ‘ಸಾರಾಯಿ…’ ಹಾಡು ಬಿಡುಗಡೆಯಾಗಿದ್ದು, ಚರಣ್ ರಾಜ್ ಸಂಗೀತ ಕೊಂಚ ಮಟ್ಟಿಗೆ ಸಂಗೀತ ಪ್ರಿಯರಿಗೆ ಕಿಕ್ ನೀಡಿವೆ.

ಇದೇ ಖುಷಿಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ಇಂದು ಮೂರನೇ ಹಾಡನ್ನು ಬಿಡುಗಡೆ ಮಾಡಿದೆ. ‘ಓಗ ಓಗ’ ಎಂದು ಸಾಗುವ ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದು, ಗಾಯಕ ಕಪಿಲನ್ ಧ್ವನಿಯಾಗಿದ್ದಾರೆ. ಕನಕಪುರದ ಕ್ವಾರಿಯೊಂದರಲ್ಲಿ ಹಲವಾರು ಮಂದಿ ಡಾನ್ಸರ್‌ಗಳ ಜತೆ ಅಭಿಷೇಕ್ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ‘‘ಓಗ ಓಗ’ ಎಂದರೆ ಅರ್ಥವೇ ಇಲ್ಲದ ಪದ. ಆದರೆ, ಈ ಹಾಡಿನಲ್ಲಿ ಸಂತೋಷವಾದಾಗ ಗುನುಗುವ ಪದದಂತೆ ಬಳಸಿಕೊಂಡಿದ್ದೇವೆ. ಇಡೀ ಹಾಡು ಕನ್ನಡ ಮತ್ತು ಗಿಬ್ರಿಶ್ ಸಾಹಿತ್ಯದಲ್ಲೇ ಇರಲಿದ್ದು, ಎನರ್ಜಿಟಿಕ್ ಹಾಗೂ ಕೇಳಲು ವಿಭಿನ್ನ ಸೌಂಡಿಂಗ್‌ನಿಂದ ಕೂಡಿರಲಿದೆ’ ಎಂದು ಹೇಳಿಕೊಳ್ಳುತ್ತಾರೆ ಚರಣ್ ರಾಜ್.

ಚಿತ್ರದಲ್ಲಿ ಅಭಿಷೇಕ್ ಪಾತ್ರಕ್ಕಾಗಿ ತೂಕ ಇಳಿಸಿಕೊಂಡು, ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ನೈಜ ಘಟನೆಗಳಿಗೆ ಸಿನಿಮೀಯ ಸ್ಪರ್ಶ ನೀಡಿದ್ದಾರೆ ನಿರ್ದೇಶಕ ದುನಿಯಾ ಸೂರಿ. ಚಿತ್ರಕ್ಕೆ ರವಿವರ್ಮ ಸಾಹಸ, ದೀಪು ಎಸ್. ಕುಮಾರ್ ಸಂಕಲನವಿರಲಿದೆ. ಸಿನಿಮಾ ಇದೇ ತಿಂಗಳಂತ್ಯ ತೆರೆಗೆ ಬರುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net