ಮತ್ತೆ ಬಂದ ಕಾಶಿನಾಥ್​ ಮಗ; 'ಸೂರಿ ಲವ್ಸ್ ಸಂಧ್ಯಾ' ಚಿತ್ರದಲ್ಲಿ ನಟನೆ

Suri Loves Sandhya 6
Published on

ಬೆಂಗಳೂರು: ನಟ-ನಿರ್ದೇಶಕ ಕಾಶಿನಾಥ್​ ಅವರ ಮಗ ಅಭಿಮನ್ಯು ಕಾಶೀನಾಥ್​, ಬಹಳ ದಿನಗಳ ನಂತರ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. 'ಸೂರಿ ಲವ್ಸ್​ ಸಂಧ್ಯಾ' ಎಂಬ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಇತ್ತೀಚೆಗೆ ಆ ಚಿತ್ರದ ಮುಹೂರ್ತ ನೆರವೇರಿದೆ.

15 ವರ್ಷಗಳ ಹಿಂದೆ 'ಬಾಜಿ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಮನ್ಯು. ಆ ನಂತರ ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರದಲ್ಲಿ. '12 ಎಎಂ' ಎಂಬ ಚಿತ್ರದಲ್ಲಿ ತಂದೆಯ ಜತೆಗೆ ನಟಿಸಿದ ಅವರು, ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಚಿತ್ರಕ್ಕೆ ಹೀರೋ ಆಗಿದ್ದರು. ಆ ಚಿತ್ರ ಬಿಡುಗಡೆಯಾಗುವ ಮುನ್ನವೇ ಅವರು ಹೊಸ ಚಿತ್ರದಲ್ಲಿ ಸಂಧ್ಯಾಳನ್ನು ಪ್ರೀತಿಸುವುದಕ್ಕೆ ಹೊರಟಿದ್ದಾರೆ.

ಸೆವನ್ ಕ್ರೋರ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಟಿ.ಮಂಜುನಾಥ್ ನಿರ್ಮಿಸುತ್ತಿರುವ 'ಸೂರಿ ಲವ್ಸ್​ ಸಂಧ್ಯಾ' ಚಿತ್ರಕ್ಕೆ ಯಾದವ್ ರಾಜ್​ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ಅಭಿಮನ್ಯು ಬಾರ್​ ಸಪ್ಲೈಯರ್​ ಆಗಿ ಕಾಣಿಸಿಕೊಂಡರೆ, ಅವರಿಗೆ ನಾಯಕಿಯಾಗಿ 'ಅಪೂರ್ವ' ಖ್ಯಾತಿಯ ಅಪೂರ್ವ ನಟಿಸುತ್ತಿದ್ದಾರೆ.

ಮಿಕ್ಕಂತೆ ಚಿತ್ರದಲ್ಲಿ ಪ್ರತಾಪ್‌ ನಾರಾಯಣ್, ಪಲ್ಲವಿ, ಶಾರದಮ್ಮ, ಜಯರಾಮಣ್ಣ, ಕೆ.ಎಂ.ರಾಜೇಶ್, ಮೊಟ್ಟೆ ರಾಜೇಂದ್ರನ್, ನೀನಾಸಂ ಅಶ್ವಥ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚೆನ್ನೈನ ಅರುಣಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರು, ಕೋಲಾರ, ಮಹಾರಾಷ್ಟ್ರ, ಮಧ್ಯಪ್ರದೇಶದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net