

ಕಳೆದ ವರ್ಷ ಬಿಡುಗಡೆಯಾದ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಸೋಲಿನ ಬಳಿಕ ಬಾಲಿವುಡ್ ನಟ ಆಮಿರ್ ಖಾನ್, ನಟನೆಯಿಂದ ಬ್ರೇಕ್ ಪಡೆಯುವುದಾಗಿ ತಿಳಿಸಿದ್ದರು. ಆದರೆ, ಇದೀಗ ಆ ಬ್ರೇಕ್‌ನಿಂದ ಅವರು ವಾಪಸ್ಸಾದಂತಿದೆ. ಏಕೆಂದರೆ, ಕೆಲ ದಿನಗಳ ಹಿಂದಷ್ಟೇ ಮೂರು ಸಿನಿಮಾಗಳನ್ನು ನಿರ್ಮಿಸುವ ಬಗ್ಗೆ ಮಾಹಿತಿ ನೀಡಿದ್ದ ಅವರು, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ, ನಟಿಸುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’.
‘ಈ ಚಿತ್ರದ ಬಗ್ಗೆ ಈಗಲೇ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ‘ತಾರೆ ಜಮೀನ್ ಪರ್’ ಚಿತ್ರದ ರೀತಿಯೇ ಇರಲಿದೆ. ಆದರೆ, ಅದಕ್ಕಿಂತ 10 ಹೆಜ್ಜೆ ಮುಂದೆ ಇರಲಿದೆ. ಅದು ಎಮೋಷನಲ್ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಅಳುವಂತೆ ಮಾಡಿತ್ತು. ಆದರೆ, ಈ ಸಿನಿಮಾ ನಗಿಸಲಿದೆ, ರಂಜಿಸಲಿದೆ. ನಮ್ಮಲ್ಲೂ ನ್ಯೂನತೆಗಳು, ದೌರ್ಬಲ್ಯಗಳಿವೆ. ಆ ಚಿತ್ರದಲ್ಲಿ ನನ್ನ ಪಾತ್ರ ಬಾಲಕನ ನೆರವಿಗೆ ಧಾವಿಸಿತ್ತು. ಆದರೆ, ಈ ಚಿತ್ರದಲ್ಲಿ ಒಂಬತ್ತು ಹುಡುಗರು ನನ್ನ ಪಾತ್ರದ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ ಆಮಿರ್.
2007ರಲ್ಲಿ ರಿಲೀಸ್ ಆಗಿದ್ದ ‘ತಾರೆ ಜಮೀನ್ ಪರ್’ ಚಿತ್ರ ಮೂರು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡು, ಆಸ್ಕರ್‌ಗೂ ಭಾರತದಿಂದ ಆಯ್ಕೆಯಾಗಿತ್ತು. ಇದೀಗ 16 ವರ್ಷಗಳ ನಂತರ ಆಮಿರ್ ಅದೇ ಥೀಮ್‌ನಲ್ಲಿ ಹೊಸ ಕಥೆ ಹೇಳಲು ಮುಂದಾಗಿದ್ದಾರೆ. ಅದರ ಜತೆಗೆ ‘ಲಾಪತಾ ಲೇಡೀಸ್’, ‘ಲಾಹೋರ್ 1947’ ಹಾಗೂ ಮಗ ಜುನೈದ್ ಖಾನ್ ನಟಿಸಲಿರುವ ಚಿತ್ರವನ್ನು ನಿರ್ಮಿಸಲಿದ್ದಾರೆ.
-ಏಜೆನ್ಸೀಸ್