ನವೆಂಬರ್​ನಲ್ಲಿ 'ಆರ್​ಆರ್​ಆರ್​' ತಂಡ ಸೇರಿಕೊಳ್ತಾರಂತೆ ಆಲಿಯಾ ಭಟ್​

Alia - RRR
Published on

ಹೈದರಾಬಾದ್​: 'ಆರ್​ಆರ್​ಆರ್​' ಚಿತ್ರದಲ್ಲಿ ರಾಮ್​ಚರಣ್​ ತೇಜ ಎದುರು ಆಲಿಯಾ ಭಟ್​ ನಾಯಕಿಯಾಗಿ ನಟಿಸಬೇಕಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಚಿತ್ರ ಪ್ರಾರಂಭವಾದ ಹೊಸದರಲ್ಲೇ, ಆಲಿಯಾ ನಾಯಕಿಯಾಗಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ 'ಆರ್​ಆರ್​ಆರ್' ಚಿತ್ರದಲ್ಲಿ ಆಲಿಯಾ ನಟಿಸುವುದೇ ಡೌಟ್​ ಎಂಬ ಮಾತು ಕೇಳಿ ಬಂದಿತ್ತು. 'ಸಡಕ್​ 2' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಎಲ್ಲಿ ರಾಜಮೌಳಿ ಸಹ ಆಲಿಯಾ ಅವರನ್ನು ತಮ್ಮ ಚಿತ್ರದಿಂದ ಕೈಬಿಡುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.

ನಿರ್ದೇಶಕ ರಾಜಮೌಳಿ ಮಾತ್ರ ಯಾರು ಏನೇ ಹೇಳಿದರೂ, ತಮ್ಮ 'ಆರ್​ಆರ್​ಆರ್​' ಚಿತ್ರದಿಂದ ಯಾವುದೇ ಕಾರಣಕ್ಕೂ ಆಲಿಯಾ ಅವರನ್ನು ಕೈಬಿಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಈಗಾಗಲೇ 'ಆರ್​​ಆರ್​ಆರ್​' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಆಲಿಯಾ ಭಟ್​ ಸಹ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, 'ಆರ್​ಆರ್​ಆರ್​' ಚಿತ್ರದಲ್ಲಿ ಆಲಿಯಾ ಬಹಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರ ಅಭಿನಯದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಇನ್ನು ಒಂದು ದೊಡ್ಡ ದೃಶ್ಯದ ಚಿತ್ರೀಕರಣ ಮುಗಿದರೆ, ಆಲಿಯಾ ಭಾಗದ ಚಿತ್ರೀಕರಣವೇ ಮುಕ್ತಾಯವಾಗುತ್ತದಂತೆ. ಈ ಹಿನ್ನೆಲೆಯಲ್ಲಿ ನವೆಂಬರ್​ನಲ್ಲಿ ಆಲಿಯಾ ಡೇಟ್ಸ್​ ಕೊಟ್ಟಿದ್ದು, ಆಗ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದಂತೆ.

ಈ ದೃಶಯದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಸಹ ಅಭಿನಯಿಸುತ್ತಿದ್ದು, ಈ ದೃಶ್ಯವು ಚಿತ್ರದ ಪ್ರಮುಖ ಹೈಲೈಟ್​ ಆಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net